2022ರ ವೇಳೆಗೆ ರಾಜ್ಯದಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು, ಆ.23: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶವಿದ್ದು, 2022ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಮಾಹಿತಿ-ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಆ್ಯನಿಮೇಷನ್ ಕ್ಷೇತ್ರದ ಉದ್ಯಮ ಮುಖಂಡರ ಜತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗ ಡಿಜಿಟಲ್ ಆರ್ಟ್ ಸೆಂಟರ್ ಜತೆಗೆ ಇನ್ನೂ 11 ಸೆಂಟರ್‌ಗಳನ್ನು ಮಾಡಲಾಗುವುದು. 2022ರ ವೇಳೆಗೆ 50 ಡಿಜಿಟಲ್ ಆರ್ಟ್ ಸೆಂಟರ್‌ಗಳು ಪ್ರಾರಂಭವಾಗಲಿವೆ. ಕಂಪೆನಿಗಳಿಗೆ ಸರಕಾರ ಯಾವುದೇ ಪಾಲಿಸಿಯ ಒತ್ತಡ ಹೇರುವುದಿಲ್ಲ. ಕಂಪೆನಿಗಳು ಹೇಳಿದಂತೆ ನಡೆದುಕೊಳ್ಳಲಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹಲವಾರು ಕಂಪೆನಿಗಳು ಯಶಸ್ವಿಯಾಗಿವೆ ಎಂದು ಹೇಳಿದರು.
ಬೆಂಗಳೂರು ಕ್ರಿಯಾಶೀಲ ನಗರ ಎಂಬ ಹೆಸರು ಪಡೆದಿದೆ. ನಗರದ ಎಲ್ಲ ಭಾಗಗಳಲ್ಲೂ ಹೂಡಿಕೆ ಮಾಡಲು ಅವಕಾಶವಿದೆ ಎಂದ ಅವರು, ಇತ್ತೀಚೆಗೆ ಎಲಿವೇಟ್-100 ಎಂಬ ಹೊಸ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದರಲ್ಲಿ 1,700 ಅರ್ಜಿಗಳು ಬಂದಿವೆ. ಅದರಲ್ಲಿ 48 ಕಂಪೆನಿಗಳು ಆ್ಯನಿಮೇಷನ್‌ಗೆ ಸಂಬಂಧಿಸಿದ್ದಾಗಿದೆ. ಇವುಗಳಲ್ಲಿ 33 ಕಂಪೆನಿಗಳು ಅರ್ಹತೆ ಪಡೆದಿವೆ ಎಂದು ಮಾಹಿತಿ ನೀಡಿದರು.
ಎಬಿವಿಐ ಕಾರ್ಯದರ್ಶಿ ಆದಿಶಯನ್, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಟೆಕ್ನಿಕಲರ್ ಇಂಡಿಯಾ ದೇಶೀಯ ಮುಖ್ಯಸ್ಥ ಬೀರೇನ್ ಘೋಷ್, ರಾಜೇಶ್‌ರಾವ್, ನಂದೀಶ್, ರಾಜೇಶ್ ಮಿಶ್ರ, ಪ್ರದೀಪ್ ನಾಯರ್ ಮತ್ತಿತರರು ಹಾಜರಿದ್ದರು.







