‘ಪರಿಸರ ಸ್ನೇಹಿ’ ಗಣೇಶೋತ್ಸವ : ಜನಜಾಗೃತಿ ಆಂದೋಲನ

ಮಡಿಕೇರಿ ಆ.23 :ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗೌರಿ-ಗಣೇಶ ಚತುರ್ಥಿಗೆ ಪೂರ್ವಭಾವಿಯಾಗಿ ‘ಪರಿಸರ ಸ್ನೇಹಿ ಗಣೇಶ ಬಳಕೆಗಾಗಿ ಗಣೇಶ ಉತ್ಸವ’ ಕುರಿತಂತೆ ಪರಿಸರ ಜಾಗೃತಿ ಆಂದೋಲನವು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮಡಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಇಕೋ-ಕ್ಲಬ್ ವತಿಯಿಂದ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಕುರಿತು ಪರಿಸರ ಜಾಗೃತಿ ಆಂದೋಲನ ಏರ್ಪಡಿಸಲಾಗಿತ್ತು.
ಶಾಲೆಯಲ್ಲಿ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಅಂಗವಾಗಿ ಮಕ್ಕಳಿಗೆ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಏರ್ಪಡಿಸಲಾಗಿತ್ತು. ಶಾಲೆಯ ಮಕ್ಕಳು ತುಂಬ ಖುಷಿಯಿಂದ ಜೇಡಿಮಣ್ಣಿನಿಂದ ತಯಾರಿಸಿದ್ದ ವಿವಿಧ ನಮೂನೆಯ ಗಣೇಶ ಮಣ್ಣಿನ ಮೂರ್ತಿಗಳು ಜನರ ಗಮನ ಸೆಳೆದವು.
‘ಹಸಿರೆಡೆಗೆ ನಡೆ-ಗ್ರೋ ಗ್ರೀನ್, ಗ್ರೀನ್ ಯಾತ್ರಾ’ ಹಾಗೂ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಅವರು, ಕೊಡಗಿನಲ್ಲಿ ‘ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಸ್ಥಾಪಿಸೋಣ-ಜಲಮೂಲಗಳನ್ನು ಉಳಿಸೋಣ’ ಎಂಬ ಘೋಷಣೆಯಡಿ ನೈಸರ್ಗಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಕೆ ಮಾಡುವ ಉದ್ದೇಶದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗೌರಿ-ಗಣೇಶೋತ್ಸವದಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಪರಿಸರ ಸ್ನೇಹಿ ನೈಸರ್ಗಿಕ ಜೇಡಿಮಣ್ಣಿನ ಗಣೇಶಮೂರ್ತಿಯನ್ನು ಸ್ಥಾಪಿಸುವ ಕುರಿತು ಶಾಲೆಗಳ ಪರಿಸರ ಸಂಘದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಪರಿಸರ ಜಾಗೃತಿ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಬೇಕು. ಸೀಸಲೇಪಿತ ವಿಷಕಾರಿ ಹಾಗೂ ರಾಸಾಯನಿಕ ಬಣ್ಣದ ಗಣೇಶಮೂರ್ತಿ ಬಳಕೆಯಿಂದ ಜಲಮೂಲನಿಧಿಗೆ ಆಗುವ ಮಾಲಿನ್ಯ ಹಾಗೂ ಅಪಾಯದ ಬಗ್ಗೆ ಮಾಹಿತಿ ನೀಡಿದರು.
ಪಿ.ಓ.ಪಿ. ಮತ್ತು ರಾಸಾಯನಿಕ ಗಣೇಶ ವಿಗ್ರಹಗಳನ್ನು ಜಲಮೂಲಗಳಿಗೆ ಬಿಡುವುದರಿಂದ ಜಲಮಾಲಿನ್ಯ ಉಂಟಾಗಿ ಜಲಚರಗಳು ಮತ್ತು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗುತ್ತಿರುವ ಬಗ್ಗೆ ಜನಜಾಗೃತಿ ಮೂಡಿಸಲು ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲಾ –ಕಾಲೇಜಿನ ಇಕೋ-ಕ್ಲಬ್ (ಪರಿಸರ ಸಂಘ)ದ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜನರನ್ನು ಪ್ರೇರೇಪಿಸಿ ಮಕ್ಕಳಿಂದ ಜೇಡಿಮಣ್ಣಿನಿಂದ ನೈಸರ್ಗಿಕ ಗಣೇಶ ಮೂರ್ತಿ ತಯಾರಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಲು ಮನವಿ ಮಾಡಲಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
‘ಪರಿಸರ ಸ್ನೇಹಿ ಗಣೇಶೋತ್ಸವ’ದ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮಾತನಾಡಿ, ಪಿ.ಓ.ಪಿ., ಸೀಸದಂತಹ ವಿಷಕಾರಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶಮೂರ್ತಿಗಳನ್ನು ಬಳಸದೇ ಮಣ್ಣಿನ ಗಣೇಶಮೂರ್ತಿ ಮಾತ್ರ ಬಳಕೆ ಮಾಡುವ ಮೂಲಕ ಮಾಲಿನ್ಯ ಮುಕ್ತ ನದಿ, ಕೆರೆ, ಬಾವಿ ಮತ್ತಿತರ ಜಲಮೂಲ ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿ.ಓ.ಪಿ.), ಸೀಸದಂತಹ ವಿಷಕಾರಿ ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ನಂತರ ನದಿ, ಕೆರೆ, ಬಾವಿ ಇತರೆ ಕಡೆಗಳಲ್ಲಿ ಜಲಮೂಲಗಳಿಗೆ ವಿಸರ್ಜಿಸುವುದನ್ನು ಸರ್ಕಾರ ನಿಷೇಧಿಸಿದೆ. ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ.) ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ತಯಾರು ಮಾಡುವುದು ಮತ್ತು ಮಾರಾಟ ಮಾಡುವುದರ ವಿರುದ್ಧ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ತಿಳಿಸಿದರು.
ಪಿ.ಓ.ಪಿ.ಯಿಂದ ಕೂಡಿದ ಗಣೇಶ ಮೂರ್ತಿ ಬದಲಿಗೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜಾಗೃತಿ ಮೂಡಿಸುವ ಕುರಿತು ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸ್ಥಳೀಯ ಸಂಸ್ಥೆಗಳಾದ ನಗರ ಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣೇಶನ್ ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ‘ಗಣೇಶ ಚತುರ್ಥಿಯನ್ನು ಶಬ್ದ, ವಾಯು ಹಾಗೂ ಜಲ ಮಾಲಿನ್ಯ ರಹಿತವಾಗಿ ಆಚರಿಸಲು ದೃಢ ಸಂಕಲ್ಪ ತೊಡಬೇಕು’ ಎಂದರು. ಕೊಡಗಿನಲ್ಲಿ ಹಮ್ಮಿಕೊಂಡಿರುವ ಪರಿಸರ ಸ್ನೇಹಿ ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ದಿಸೆಯಲ್ಲಿ ನಾಗರಿಕರು ಸೀಸ, ಪಾದರಸ ಲೇಪಿತ ರಾಸಾಯನಿಕ ಬಣ್ಣಗಳಿಂದ ತಯಾರಿಸಿದರೀಸ್(ಪಿ.ಓ.ಪಿ.) ಗಣಪತಿ ಮೂರ್ತಿಗಳನ್ನು ಬಳಸದೇ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ‘ಪರಿಸರ ಸ್ನೇಹಿ’ ಗಣೇಶ ವಿಗ್ರಹಗಳನ್ನು ಖರೀದಿಸಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದು ಫಿಲಿಪ್‍ವಾಸ್ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಶಿವರಾಂ ಶಿವಳ್ಳಿ ಅವರು ಇಂತಹ ಪರಿಸರ ಜಾಗೃತಿ ಅಭಿಯಾನಗಳು ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿವೆ ಎಂದರು. ಗೌರಿ-ಗಣೇಶ ಹಬ್ಬದ ಸಂದರ್ಭ ರಾಸಾಯನಿಕ ಬಣ್ಣದ ಗಣೇಶ ವಿಗ್ರಹದ ಬದಲಿಗೆ ಪರಿಸರಸ್ನೇಹಿ ನೈಸರ್ಗಿಕ ಜೇಡಿಮಣ್ಣಿನ ಗಣೇಶಮೂರ್ತಿ ಸ್ಥಾಪಿಸುವ ಕುರಿತು ಶಾಲೆಗಳಲ್ಲಿ ಪರಿಸರ ಸಂಘದ ಮೂಲಕ ಶಿಕ್ಷಕರು ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಗೌರವ ಕೋಶಾಧಿಕಾರಿ ಎಸ್.ಎಚ್.ಈಶ, ಸಮಿತಿ ಸದಸ್ಯೆ ಡಿ.ಎಂ.ರೇವತಿ, ಕುಶಾಲನಗರ ಜೆಸಿಐ ಕಾವೇರಿ ಸಂಸ್ಥೆಯ ಅಧ್ಯಕ್ಷ ನಂದೀಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ನಂತರ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಕುರಿತಂತೆ ಪರಿಸರ ಘೋಷಣೆಗಳನ್ನು ಒಳಗೊಂಡ ಭಿತ್ತಿಫಲಕಗಳನ್ನು ಪರಿಸರ ಘೋಷಣೆ ಕೂಗಿ ಗಮನ ಸೆಳೆದರು.







