ಸಂಘ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ ಸಮಿತಿ
ಖಾಸಗಿ ವೈದ್ಯಕೀಯ ವಿಧೇಯಕ
ಬೆಂಗಳೂರು, ಆ.23: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ’ಕ್ಕೆ ಸಂಬಂಧಿಸಿದಂತೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಈ ವಿಧೇಯಕದ ಪರಿಶೀಲನೆಗಾಗಿ ರಚಿಸಲಾಗಿರುವ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ಸಂಗ್ರಹಿಸಿತು.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿಧೇಯಕದಲ್ಲಿ ತರಬೇಕಾದ ಬದಲಾವಣೆಗಳ ಕುರಿತು ಸಲಹೆಗಳನ್ನು ನೀಡಿದರು.
ವಿಧೇಯಕದಲ್ಲಿ ಶಿಕ್ಷೆ ಎನ್ನುವ ಪದವನ್ನು ಮುಂದಿಟ್ಟುಕೊಂಡು ಕಾನೂನಿನ ಕುಣಿಕೆ ಬಿಗಿಯಲು ಮುಂದಾದರೆ, ವೈದ್ಯರು ಹಾಗೂ ರೋಗಿಗಳ ಸಂಬಂಧ ಹದಗೆಡುವ ಸಾಧ್ಯತೆಗಳಿವೆ. ಆದುದರಿಂದ, ಈ ವಿಧೇಯಕವನ್ನು ಅಂಗೀಕರಿಸುವ ಮುನ್ನ ಸಾಕಷ್ಟು ಎಚ್ಚರಿಕೆವಹಿಸುವುದು ಅಗತ್ಯ ಎಂಬ ಸಲಹೆಯು ಸಭೆಯಲ್ಲಿ ವ್ಯಕ್ತವಾಯಿತು.
ಬಡವರು ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು, ಖಾಸಗಿ ಆಸ್ಪತ್ರೆಗಳಲ್ಲಿನ ಕೆಲ ವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕಾಗಿರುವುದು ಅಗತ್ಯ. ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಈ ವಿಧೇಯಕವು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟರು.
ಈ ವಿಧೇಯಕವು ಅನುಷ್ಠಾನಗೊಂಡ ನಂತರ, ಅದರ ಮೇಲುಸ್ತುವಾರಿಗೆ ಆರೋಗ್ಯಾಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು. ಸರಕಾರಿ ಆಸ್ಪತ್ರೆಗಳನ್ನು ಇತ್ತೀಚೆಗೆ ವಿದೇಶಿ ಗುತ್ತಿಗೆದಾರರ ಹಿಡಿತಕ್ಕೆ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೆಲವು ಸಂಘಸಂಸ್ಥೆಗಳ ಮುಖ್ಯಸ್ಥರು ಮನವಿ ಮಾಡಿದರು.
ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ನೀಡಿದ ಸಲಹೆ, ಸೂಚನೆಗಳು, ಅಭಿಪ್ರಾಯಗಳನ್ನು ಆಲಿಸಿದ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ಕೆ.ಎನ್.ರಾಜಣ್ಣ, ಮುಂದಿನ ಅಧಿವೇಶನದಲ್ಲೆ ಈ ಖಾಸಗಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಳ್ಳಲು ಸರಕಾರ ಕಾಳಜಿವಹಿಸುವುದು ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಕೆ.ಎಸ್.ಈಶ್ವರಪ್ಪ, ಡಾ.ಎ.ಬಿ.ಮಾಲಕರೆಡ್ಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ.ಸಿ.ಎನ್.ಅಶ್ವಥ್‌ನಾರಾಯಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೂರ್ತಿ ನಾಯ್ಕಾ, ಪಿ.ಆರ್.ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







