ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ

ಬೆಂಗಳೂರು, ಆ.23: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ವರ್ಷ ಕಳೆಯುತ್ತಿದ್ದಂತೆ ಹೊಸ ತಿರುವು ಸಿಕ್ಕಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದಾಗಿ ರಾಷ್ಟ್ರೀಯ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಎಂ.ಕೆ.ಗಣಪತಿ ಅವರ ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿದ್ದ 2500 ಫೋಟೊ, 57 ಮೆಸೇಜ್‌ಗಳು, 100 ಇ-ಮೇಲ್ಗಳು ನಾಶವಾಗಿವೆ. ಜೊತೆಗೆ 145ಕ್ಕೂ ಹೆಚ್ಚು ಪ್ರಮುಖ ದಾಖಲೆಯ ಪಿಡಿಎಫ್ ಫೈಲ್ ನಾಶವಾಗಿದೆ. ಇದೆಲ್ಲಾ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಮಾಜಿ ಸಚಿವರು, ಶಾಸಕರಿಗೆ ಸಂಬಂಧಿಸಿದ ದಾಖಲೆಗಳು ಸಹ ಅಳಿಸಿ ಹೋಗಿದೆ ಎಂದು ವರದಿ ನೀಡಿದೆ.
ಸಿಐಡಿ ಫೊರೆನ್ಸಿಕ್ ವರದಿಯನ್ನು ತನಿಖೆ ವೇಳೆ ಪರಿಗಣಿಸದೆ ಸಚಿವ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ: 2016ರ ಜು.7 ರಂದು ಡಿವೈಎಸ್ಪಿ ಎಂ.ಕೆ.ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದರೂ ಆದರೆ ಅದಕ್ಕೆ ಸಚಿವ ಕೆ.ಜೆ.ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿದ್ದರು.







