ಅಫ್ಘಾನ್: ಮಿನಿಸ್ಕರ್ಟ್ ಮಹಿಳೆಯರ ಚಿತ್ರ ನೋಡಿ ಸೇನಾ ಹೆಚ್ಚಳಕ್ಕೆ ಟ್ರಂಪ್ ಅಸ್ತು!

ವಾಶಿಂಗ್ಟನ್, ಆ. 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಿಂದ ಹಿಂದೆ ಸರಿಯುವಂತೆ ಮಾಡುವುದು ಕಷ್ಟದ ಕೆಲಸ.
ಆದರೆ, ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುವಂತೆ ಟ್ರಂಪ್ ಮನವೊಲಿಸುವ ಕೆಲಸದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್‌ಮಾಸ್ಟರ್ ಯಶಸ್ವಿಯಾದರು. ಇದಕ್ಕಾಗಿ ಅವರು ಹಲವಾರು ತಂತ್ರಗಳನ್ನು ಬಳಸಿದರು. ಅದರಲ್ಲಿ ಒಂದು- ಅಫ್ಘಾನಿಸ್ತಾನದ ಮಹಿಳೆಯರು ಮಿನಿ ಸ್ಕರ್ಟ್‌ಗಳನ್ನು ಧರಿಸಿರುವ 1970ರ ದಶಕದ ಚಿತ್ರವೊಂದನ್ನು ಅಧ್ಯಕ್ಷರಿಗೆ ತೋರಿಸಿರುವುದು ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಅಫ್ಘಾನಿಸ್ತಾನದಿಂದ ಅಮೆರಿಕನ್ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಉದ್ದೇಶವನ್ನು ಟ್ರಂಪ್ ಹೊಂದಿದ್ದರು. ಇದನ್ನು ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದರು. ಇದರಿಂದ ಅಮೆರಿಕಕ್ಕೆ ತುಂಬಾ ಹಣ ಉಳಿತಾಯವಾಗುತ್ತದೆ ಎಂದಿದ್ದರು.
ಆದರೆ, ಅಮೆರಿಕನ್ ಸೈನಿಕರನ್ನು ಅಫ್ಘಾನಿಸ್ತಾನದಿಂದ ಯಾಕೆ ಹಿಂದಕ್ಕೆ ಕರೆಸಿಕೊಳ್ಳಬಾರದು ಎಂಬ ಬಗ್ಗೆ ಅಧ್ಯಕ್ಷರಿಗೆ ಮನವರಿಕೆ ಮಾಡುತ್ತಿದ್ದ ವೇಳೆ, ಮೆಕ್‌ಮಾಸ್ಟರ್ ಕಪ್ಪುಬಿಳುಪು ಚಿತ್ರವನ್ನು ಅವರಿಗೆ ತೋರಿಸಿದರು ಎನ್ನಲಾಗಿದೆ.
‘‘ಮಿನಿಸ್ಕರ್ಟ್ ಧರಿಸಿ ಕಾಬೂಲ್‌ನ ರಸ್ತೆಯಲ್ಲಿ ಅಫ್ಘಾನ್ ಮಹಿಳೆಯರು ನಡೆಯುತ್ತಿರುವುದನ್ನು ತೋರಿಸುವ 1972ರ ಚಿತ್ರವನ್ನು ಅವರು (ಮೆಕ್‌ಮಾಸ್ಟರ್) ಟ್ರಂಪ್‌ಗೆ ತೋರಿಸಿದರು. ಮೊದಲು ಅಫ್ಘಾನಿಸ್ತಾನದಲ್ಲಿ ಪಾಶ್ಚಾತ್ಯ ಪದ್ಧತಿಗಳು ಪ್ರಚಲಿತದಲ್ಲಿದ್ದವು ಹಾಗೂ ಅದು ಮುಂದಿನ ದಿನಗಳಲ್ಲಿ ಮರಳಬಹುದು ಎಂಬುದಾಗಿ ವಿವರಿಸಿದರು’’ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮುಂದುವರಿಸಲು ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ ಸೈನಿಕರ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂಬುದಾಗಿ ಟ್ರಂಪ್ ಸೋಮವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.







