ಕೊಡಗು: 4 ತಿಂಗಳಿನಲ್ಲಿ 37 ಶಿಶುಗಳ ಮರಣ
ಶಿಶು, ತಾಯಿ ಮರಣ ತಡೆಗಟ್ಟಲು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಆ. 23: ಶಿಶು ಮತ್ತು ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಭಾಂಗಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಶಿಶು ಮತ್ತು ತಾಯಿ ಮರಣ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಶಿಶು ಮತ್ತು ತಾಯಿ ಮರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆಸ್ಪತ್ರೆಗೆ ಬರುವ ಶಿಶು ಮತ್ತು ತಾಯಂದಿರಿಗೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ಶಿಶು ಮತ್ತು ತಾಯಿ ಮರಣ ತಪ್ಪಿಸಬೇಕಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಆಸ್ಪತ್ರೆಗೆ ಬರುವ ಎಲ್ಲರಿಗೂ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ಹಾಡಿಗಳಲ್ಲಿ ಶಿಶು ಮರಣ ಹೆಚ್ಚು ಕಂಡುಬಂದಿದೆ, ಆದ್ದರಿಂದ ಎಸೆಸೆಲಿ /ಪಿಯುಸಿ ವ್ಯಾಸಂಗ ಮಾಡಿರುವ ಗಿರಿಜನ ಮಹಿಳೆಯರಿಗೆ ತರಬೇತಿ ನೀಡಿ ಆರೋಗ್ಯ ಪ್ರೇರಕಿಯರನ್ನಾಗಿ ನಿಯೋಜಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಇನ್ನಷ್ಟು ಆರೋಗ್ಯ ಪ್ರೇರಕಿಯರನ್ನು ನಿಯೋಜಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ತಿಳಿಸಿದರು. ಜಿಲ್ಲೆಯ ಬಾಳೆಲೆ, ನಂಜರಾಯಪಟ್ಟಣ, ಮೂರ್ನಾಡು ಮತ್ತಿತರ ಕಡೆಗಳಲ್ಲಿ ಶಿಶು ಮರಣ ಹೆಚ್ಚಾಗಿ ಕಂಡುಬಂದಿದೆ. ಆದ್ದರಿಂದ ಇಂತಹ ಕಡೆಗಳಲ್ಲಿ ಹೆಚ್ಚಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನಿಯೋಜಿಸುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಿದೆ. ಆರೋಗ್ಯ ಸೇವಾ ಸೌಲಭ್ಯಗಳು ತಲುಪುತ್ತಿವೆ. ಆರೋಗ್ಯ ಸೇವೆಯನ್ನು ಹಾಡಿಯ ಜನರಿಗೆ ತಲುಪಿಸುವಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಆರ್.ಸಿ.ಎಚ್.ಅಧಿಕಾರಿ ಡಾ.ನಿಲೇಶ್ ಅವರು, ಶಿಶು ಮತ್ತು ತಾಯಿ ಮರಣ ಸಂಬಂಧಿಸಿದಂತೆ ಮಾಹಿತಿ ನೀಡಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 37 ಶಿಶು ಮರಣ ಹೊಂದಿವೆ. ಈ 37 ಶಿಶುಗಳಲ್ಲಿ 23 ಆಸ್ಪತ್ರೆಯಲ್ಲಿ ಮತ್ತು 14 ಶಿಶುಗಳು ಮನೆ ಹಾಗೂ ಪ್ರಯಾಣ ಸಮಯದಲ್ಲಿ ಮೃತಪಟ್ಟಿವೆ ಹಾಗೆಯೇ ಒಬ್ಬ ತಾಯಿ ಜೂನ್ ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂದು ಡಾ.ನಿಲೇಶ್ ಅವರು ತಿಳಿಸಿದರು.
ತಾಯಂದಿರು ಕಾಲ ಕಾಲಕ್ಕೆ ಚಿಕಿತ್ಸೆ ಪಡೆಯದಿರುವುದು, ಮಕ್ಕಳಿಗೆ ತಗಲುವ ಸೋಂಕು, ವಾಂತಿ-ಬೇಧಿ, ತೂಕ ಕಡಿಮೆ ಹೀಗೆ ವಿವಿಧ ಕಾರಣಗಳಿಂದ ಶಿಶುಗಳು ಮರಣ ಹೊಂದುತ್ತಿವೆ, ಆದ್ದರಿಂದ ಶಿಶು ಬೆಳವಣಿಗೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಸೌಮ್ಯ ಅವರು ಮಾಹಿತಿ ನೀಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಿಕುಮಾರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಮೂವರು ಮೃತಪಟ್ಟಿದ್ದು, 199 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಂದಿ ಚಿಕಿತ್ಸೆ ನಿರಾಕರಿಸಿದ್ದಾರೆ.
ಕ್ಷಯರೋಗ ನಿಯಂತ್ರಣ ಸಂಬಂಧ ಹಲವು ಮಾಹಿತಿ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್ ಅವರು ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು 193, ಎಚ್1ಎನ್1 16 ಪ್ರಕರಣಗಳು ಕಂಡುಬಂದಿದ್ದು, ಇವರಲ್ಲಿ ಶೇ 90 ರಷ್ಟು ಮಂದಿ ಗುಣಮುಖರಾಗಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾಸ್ಪತ್ರೆಯ ಸ್ಥಾನಿಕ ವೈಧ್ಯಾಧಿಕಾರಿ ಡಾ.ಎಂ.ಸದಾಶಿವಪ್ಪ, ಡಾ.ಆಶಾ ಅವರು ಆರೋಗ್ಯ ಸಂಬಂಧ ಹಲವು ಮಾಹಿತಿ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಮಂಜುನಾಥ್, ಸ್ವಾಮಿ, ದಿವಾಕರ, ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳ ವೈದ್ಯರು, ಶ್ರುಶ್ರೂಷಕರು ಮತ್ತಿತರರು ಉಪಸ್ಥಿತರಿದ್ದರು.







