ಕೃಷಿ ಉತ್ತೇಜನಕ್ಕೆ ಸಮಗ್ರ ಯೋಜನೆ: ಸಂಸದ ನಳಿನ್

ಮಂಗಳೂರು, ಆ. 23: ದೇಶದಲ್ಲಿ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ಹಂತಗಳ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಮೀನುಗಾರಿಕೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಬೆಲೆ ಆಯೋಗ ಆಯೋಜಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ನ್ಯೂ ಇಂಡಿಯಾ ಮಂಥನ್ ಎಂಬ ಸಂಕಲ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾವಯವ ಕೃಷಿಗೆ ಉತ್ತೇಜನ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು, ರೈತರಿಗೆ ಸಕಾಲದಲ್ಲಿ ರಸಗೊಬ್ಬರ ವಿತರಣೆ, ಮಣ್ಣಿನ ಪರೀಕ್ಷೆ ಹಾಗೂ ಕಾರ್ಡ್ ವಿತರಣೆ ಮತ್ತು ಕೃಷಿ ಸಿಂಚನ ಯೋಜನೆ ಜಾರಿಗೆ ತಂದಿದ್ದಾರೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಹಳ್ಳಿಗೆ ಹೋಗಿ ರೈತರಿಗೆ ಸೌಲಭ್ಯಗಳ ಮಾಹಿತಿ ಕೊಡಬೇಕು ಎಂದು ಅವರು ಹೇಳಿದರು.
ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಎಂ.ಎನ್. ವೇಣುಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೀದರ್‌ನ ಪಶು ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಂ. ಶಿವಪ್ರಕಾಶ್, ಮಿನುಗಾರಿಕೆ ಇಲಾಖೆ ಉಪನಿರ್ದೇಶಕ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಅಧಿಕಾರಿಗಳು ಮತ್ತು ಕೃಷಿಕರಿಗೆ ಸಂಸದರು ಪ್ರತಿಜ್ಞಾ ವಿಧಿ ಬೋಧಿಸಿದರು. ಕೃಷಿ ಕ್ಷೇತ್ರದ ಸಾಧಕರಾದ ಬಾಲಕೃಷ್ಣ ಶರ್ಮ, ಪ್ರಭಾಕರ ದರೇಗುಡ್ಡೆ, ಸ್ಟ್ಯಾನಿ ಮಿರಾಂದ, ನಾಗರಾಜ್ ವಿಲ್ಫ್ರೆಡ್ ನೊರೊನ್ಹ, ಕಿಶೋರ್ ಸಲಿಗ, ಬ್ಲಾನಿ ಡಿಸೋಜ ಮತ್ತು ಸನ್ನಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಹರೀಶ್ ಶೆಣೈ ಸ್ವಾಗತಿಸಿದರು. ಪಶು ಸಂಗೋಪನಾ ವಿಜ್ಞಾನಿ ರಶ್ಮಿ ವಂದಿಸಿದರು.







