ದೇರಾ ಮುಖ್ಯಸ್ಥನ 50 ಸಾವಿರ ಬೆಂಬಲಿಗರು ಪಂಚಕುಲಕ್ಕೆ, ಶಸ್ತ್ರಾಸ್ತ್ರ ದಾಸ್ತಾನು
ಆ. 25ರಂದು ಅತ್ಯಾಚಾರ ಪ್ರಕರಣದ ತೀರ್ಪು

ಪಂಚಕುಲ, ಆ. 23: ದೇರಾ ಸಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಸಿಬಿಐ ನ್ಯಾಯಾಲಯ ಆಗಸ್ಟ್ 25ರಂದು ತೀರ್ಪು ಘೋಷಿಸಲಿದ್ದು, ಈ ಹಿನ್ನೆಲೆಯಲ್ಲಿ ಅವರ ಸಾವಿರಾರು ಬೆಂಬಲಿಗರು ಇಲ್ಲಿನ ಸೆಕ್ಟರ್ 23ರಲ್ಲಿರುವ ಪಂಥದ ನಾಮ್ ಚರ್ಚ್ ಘರ್‌ಗೆ ಆಗಮಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗುವಂತೆ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ ನ್ಯಾಯಾಲಯ ಆದೇಶಿಸಿದೆ. ಗುರ್ಮೀತ್ ರಾಮ್ ರಹೀಮ್ ಸಿಂಗ್‌ರ ಕನಿಷ್ಠ 50 ಸಾವಿರ ಬೆಂಬಲಿಗರು ಇಲ್ಲಿಗೆ ಆಗಮಿಸಿದ್ದಾರೆ. ಪ್ರತಿ ಗಂಟೆಯೂ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರು ಝಿರಾಕ್‌ಪುರ-ಪಂಚಕುಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಆಟೋ ಹಾಗೂ ಬಸ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಝಿರಾಕ್‌ಪುರ ಮುಖ್ಯ ಚೌಕದಲ್ಲಿ ಪೊಲೀಸರು ಹಲವು ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಗುರ್ಮೀತ್ ರಾಮ್ ರಹೀಮ್ ಸಿಂಗ್‌ರ ಬೆಂಬಲಿಗರು ನಗರದತ್ತ ವಲಸೆ ಹೋಗುತ್ತಿರುವುದನ್ನು ತಡೆಯುತ್ತಿಲ್ಲ.
ಸೆಕ್ಟರ್ 23ರಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಪ್ರದೇಶ ಬಂದ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಚಂಡಿಗಡ ಆಡಳಿತ ಸೆಕ್ಟರ್ 16ರಲ್ಲಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಒಂದು ದಿನಕ್ಕೆ ತಾತ್ಕಾಲಿಕ ಕಾರಾಗೃಹವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ದೇರಾ ಸಚಾ ಸೌದಾದ ನಾಮ್ ಚರ್ಚಾ ಘರ್‌ನಲ್ಲಿ ಬೆಂಬಲಿಗರು ಪೆಟ್ರೋಲ್, ಡೀಸೆಲ್ ಹಾಗೂ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಇರಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರಕಿದೆ.
ನಿಷೇಧಾಜ್ಞೆ ಜಾರಿ ಹೊಸದಿಲ್ಲಿ: ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ಕುರಿತು ನ್ಯಾಯಾಲಯ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ.
ಸಮಾಜ ವಿರೋಧಿ ಶಕ್ತಿ ಅಥವಾ ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಬಂಧಿಸಲಾಗುವುದು ಎಂದು ಹಚ್ಚುವರಿ ಮುಖ್ಯ ಕಾರ್ಯದರ್ಶಿ ರಾಮ್ ನಿವಾಸ್ ತಿಳಿಸಿದ್ದಾರೆ.







