ನಾಳೆ ಯೋಧರಿಗೂ ಸಸ್ಯಹಾರಿಗಳಾಗಲು ಹೇಳುತ್ತೀರಾ?: ಜೈನ ಮುನಿಗೆ ಶಿವಸೇನೆ ಪ್ರಶ್ನೆ

ಮುಂಬೈ, ಆ.23: ‘ಮನಿ ಮತ್ತು ಮುನಿ’ (ಹಣದ ಬಲ ಹಾಗೂ ಮುನಿಯ ಬೆಂಬಲ) ಬಳಸಿಕೊಂಡು ಮೀರ-ಭಯಂದರ್ ನಗರಪಾಲಿಕೆ (ಎಂಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾ ಧಿಸಿದೆ ಎಂದು ಶಿವಸೇನೆ ಆರೋಪಿಸಿದೆ.
ಎಂಬಿಎಂಸಿ ವ್ಯಾಪ್ತಿಯಲ್ಲಿ ಗುಜರಾತಿ, ಮರ್‌ವಾರಿಗಳು ಹಾಗೂ ಉತ್ತರ ಭಾರತೀಯರು ಬಹುಸಂಖ್ಯೆಯಲ್ಲಿದ್ದಾರೆ.ಧಾರ್ಮಿಕ ಹಿನ್ನೆಲೆಯಲ್ಲಿ ಗಮನಿಸಿದರೆ ಮುಸ್ಲಿಮ್ ಹಾಗೂ ಜೈನ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂಬೈಯಿಂದ 40 ಕಿ.ಮೀ ದೂರದಲ್ಲಿರುವ ಈ ಪಶ್ಚಿಮದ ಉಪನಗರ ಮೂಲದ ಖ್ಯಾತ ಉದ್ಯಮಿಗಳು ಮುಂಬೈಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ.
ಚುನಾವಣೆಯ ಮುನ್ನಾ ದಿನ ಪ್ರಸಾರವಾದ ವೀಡಿಯೊ ಸಂದೇಶದಲ್ಲಿ ಜೈನ ಗುರು ಮುನಿ ನಯಪದ್ಮಸಾಗರ್ ಜಿ ಮಹಾರಾಜ್ ಅವರು ಬಿಜೆಪಿ ಮತ ಚಲಾಯಿಸುವಂತೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಸ್ಯಾಹಾರ ಸಂಸ್ಕೃತಿಯನ್ನು ದೇಶದಾದ್ಯಂತ ಮತ್ತು ಮೀರಾ ರೋಡ್- ಭಯಂದರ್ ಪ್ರದೇಶದಲ್ಲಿ ಪಸರಿಸಲು ಬದ್ಧವಾಗಿರುವ ಏಕೈಕ ಪಕ್ಷವಾಗಿರುವ ಬಿಜೆಪಿಗೆ ಮತ ನೀಡುವಂತೆ ಜೈನ ಗುರು ಕರೆ ನೀಡಿರುವುದು ಶಿವಸೇನೆಯ ಕಣ್ಣು ಕೆಂಪಗಾಗಿಸಿದೆ.
ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವ ಕಾರಣ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಶಿವಸೇನೆ ತಿಳಿಸಿದೆ. ಇಂದು ಮೀರಾರೋಡ್-ಭಯಂದರ್ ಪ್ರದೇಶ ಎಂದು ಹೇಳುವ ಜನರು, ನಾಳೆ ಗಡಿಕಾಯುವ ಯೋಧರು ಕೂಡಾ ಶುದ್ಧ ಸಸ್ಯಾಹಾರಿಗಳಾಗಬೇಕು ಎಂದು ಸೂಚಿಸಬಹುದು. ಇಂತಹ ಶಕ್ತಿಗಳಿಂದಾಗಿ ದೇಶ ಸರ್ವನಾಶದತ್ತ ಸಾಗಿದೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ. ಧಾರ್ಮಿಕ ಗುರುವನ್ನು ಮತದಾನದ ಪ್ರಸಾರಕ್ಕೆ ಬಳಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಹಿರಿಯ ಮುಖಂಡ ಡಾ ಕಿರಿತ್ ಸೋಮಯ,ು ಶಿವಸೇನೆ ಸೋಲಿನ ಹತಾಶೆಯಿಂದ ಈ ರೀತಿ ಮಾತನಾಡುತ್ತಿದೆ ಎಂದಿದ್ದಾರೆ. 95 ಸ್ಥಾನಗಳಿಗೆ ನಡೆದ ಎಂಬಿಎಂಸಿ ಚುನಾವಣೆಯಲ್ಲಿ ಬಿಜೆಪಿ 61 ಸ್ಥಾನ, ಶಿವಸೇನೆ 22, ಕಾಂಗ್ರೆಸ್ 10 ಮತ್ತು ಪಕ್ಷೇತರರು 2 ಸ್ಥಾನ ಪಡೆದಿದ್ದಾರೆ.







