ಭದ್ರಾವತಿ ತಹಶೀಲ್ದಾರ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಶಿವಮೊಗ್ಗ, ಆ. 24: ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ಅರೆಬಿಳಚಿ ಗ್ರಾಮದ ಕೆರೆ ಒತ್ತುವರಿಯನ್ನು ತೆರವುಗೊಳಿಸದ ತಹಶೀಲ್ದಾರ್ ಮತ್ತು ಗ್ರಾಪಂ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರು ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು, ಜಿಲ್ಲಾಧಿಕಾರಿ ಆ.22ರಂದು ಈ ಕೆರೆ ಒತ್ತುವರಿ ತೆರವುಗೊಳಿಸಲು ಆದೇಶ ಹೊರಡಿಸಿದ್ದರೂ ಸಹಾ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಸರ್ವೇ ನಂ. 255ರ ನಾಗಸಮುದ್ರ ಕೆರೆ ಮತ್ತು ಸನಂ. 102ರ ತಿರುಕಯ್ಯನಕೆರೆ ಒತ್ತುವರಿಯಾಗಿದ್ದು, ಈ ಬಗ್ಗೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಗಮನಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಒತ್ತುವರಿ ತೆರವಿಗೆ ಡಿಸಿಯವರು ಆದೇಶ ಹೊರಡಿಸಿದ್ದರೂ ಸಹಾ ಅದನ್ನು ಮುಂದೂಡಲು ಗ್ರಾಪಂ ತೀರ್ಮಾನಿಸಿದೆ ಎಂದು ಹೇಳಿದರು.
ಕೂಡಲೇ ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಯನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಧೀರರಾಜ್ ಹೊನ್ನವಿಲೆ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಸ್ಥಳೀಯರಾದ ಯು.ಕೆ. ವೆಂಕಟೇಶ್, ನಂಜುಂಡಸ್ವಾಮಿ, ರುದ್ರೇಶ, ರಮೇಶ್ ಮತ್ತಿತರರಿದ್ದರು.





