ಎರಡು ತಿಂಗಳಲ್ಲಿ 1500 ಸರ್ವೇಯರ್ ನೇಮಕ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಆ.24: ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ರಾಜ್ಯಾದ್ಯಂತ ಖಾಲಿಯಿರುವ 1500 ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಮೀನುಗಳ ಸರ್ವೇ ಕಾರ್ಯಕ್ಕೆ ಉಂಟಾಗಿರುವ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಖಾಲಿಯಾಗುತ್ತಿರುವ ಹುದ್ದೆಗಳನ್ನು ತ್ವರಿತಗತಿಯಲ್ಲಿ ತುಂಬಲಾಗುತ್ತಿದೆ. ಇತ್ತೀಚೆಗೆ ಮೂರು ಸಾವಿರ ಗ್ರಾಮಲ್ಕೆಕಿಗರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ದಾಖಲಾತಿಯ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಭೂಮಿಯ ಸರ್ವೇ ಕಾರ್ಯ, ಪೋಡಿ ಮಾಡಿಕೊಡುವ ಕಾರ್ಯ ವಿಳಂಬವಾಗುತ್ತಿದೆ. ಈ ಸರ್ವೇಯರ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಬಾರಿಯೂ ಸಮರ್ಪಕ ಪ್ರಮಾಣದ ಮಳೆ ಆಗಿಲ್ಲ. ಆದರೆ ನಿಯಮಾವಳಿಗಳ ಪ್ರಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಲು ಸೆಪ್ಟಂಬರ್ ಅಂತ್ಯದವರೆಗೂ ಕಾಯಬೇಕಾಗುತ್ತದೆ. ಕೇಂದ್ರ ಸರಕಾರ ರೂಪಿಸಿರುವ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಬರಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ತೆಂಗು ಹಾಗೂ ಅಡಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಕೇಂದ್ರ ಸರಕಾರದಿಂದ ಎಷ್ಟು ಪ್ರಮಾಣದ ನೆರವು ಕೋರಬೇಕು ಎಂಬುದು ನಿರ್ಧಾರವಾಗುತ್ತದೆ ಎಂದರು.
ಬಗರ್ ಹುಕುಂ ಸಾಗುವಳಿ ಭೂಮಿಯನ್ನು ರೈತರಿಗೆ ಒದಗಿಸಲು ಎರಡು ಅಂಶಗಳು ಪ್ರಮುಖ ಅಡ್ಡಿಯಾಗಿವೆ. ಒಂದು ಗೋಮಾಳ ಭೂಮಿಯನ್ನು ಬಗರ್ ಹುಕುಂ ಭೂಮಿ ಎಂದು ಮಂಜೂರು ಮಾಡಲು, ಮತ್ತೊಂದು ಡೀಮ್ಡ್ ಅರಣ್ಯ ಭೂಮಿಯನ್ನು ಬಿಟ್ಟು ಕೊಡಲು ಒಪ್ಪಿಗೆ ಸಿಗುತ್ತಿಲ್ಲ ಎಂದ ಅವರು, ಈ ಎರಡು ಪ್ರಮುಖ ಅಡ್ಡಿಗಳು ನಿವಾರಣೆಯಾಗದಿದ್ದರೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ. ಗೋಮಾಳ ಭೂಮಿಯ ಪ್ರಮಾಣ ಎಷ್ಟಿರಬೇಕು ಎಂಬ ಕುರಿತು ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 2.50 ಲಕ್ಷ ಬಗರ್ ಹುಕುಂ ಅರ್ಜಿಗಳು ಇತ್ಯರ್ಥವಾಗದೇ ಉಳಿದಿವೆ. ಆದಷ್ಟು ಬೇಗ ಈ ಎರಡು ಅಡ್ಡಿಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕಾನೂನನ್ನು ಉಲ್ಲಂಘಿಸಿ ಹಲವರಿಗೆ ಭೂ ಮಂಜೂರಾತಿ ಮಾಡಿದ ದೂರಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಕಾಲದಲ್ಲಿ ಅನ್ನೋದು ಬೇಡ. ಬೆಂಗಳೂರು ಜಿಲ್ಲೆಯ ಹದಿನೆಂಟು ಕಿ.ಮೀ. ವ್ಯಾಪ್ತಿಯೊಳಗೆ ಕಾನೂನು ಮೀರಿ ಭೂ ಮಂಜೂರಾತಿ ಮಾಡಿರುವುದು ನಿಜ ಎಂದರು.
ಈ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್‌ಗೆ ಆದೇಶ ನೀಡಲಾಗಿದೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಉಲ್ಲಂಘಿಸಿ ಮಾಡಿರುವ ಭೂ ಮಂಜೂರಾತಿ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.







