‘ಉನ್ನತ ಶಿಕ್ಷಣ’ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ: ಬಸವರಾಜರಾಯರಡ್ಡಿ

ಬೆಂಗಳೂರು, ಆ.24: ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಹಲವಾರು ಯೋಜನೆಗಳಿಂದಾಗಿ ಉನ್ನತ ಶಿಕ್ಷಣಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಶೇ.28ಕ್ಕೆ ಹೆಚ್ಚಳವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರಥಮ ವರ್ಷದ 1.50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದರು.
ಕಳೆದ ವರ್ಷದ ಎಸ್‌ಸಿಪಿ-ಟಿಎಸ್‌ಪಿ ಅನುದಾನದಲ್ಲಿ 36 ಸಾವಿರ ಲ್ಯಾಪ್‌ಟಾಪ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಒದಗಿಸಲು ಈಗಾಗಲೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ರಾಯರಡ್ಡಿ ಹೇಳಿದರು.
ರಾಜ್ಯದಲ್ಲಿ ಒಟ್ಟು 412 ಪ್ರಥಮ ದರ್ಜೆ ಸರಕಾರಿ ಕಾಲೇಜುಗಳಿದ್ದು, ಇಲ್ಲಿನ ಬೋಧಕರಿಗೆ ಉತ್ತಮ ತರಬೇತಿ ನೀಡಲು ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡಮಿಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಬಹುದಿನಗಳ ಬೇಡಿಕೆಯಂತೆ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
2160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವುದಕ್ಕೆ ಉತ್ತೇಜನ ನೀಡಲು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 25 ಹೊಸ ಸರಕಾರಿ ಪಾಲಿಟೆಕ್ನಿಕ್‌ಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿನಿಯರ ಒಟ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ 23 ಮಹಿಳಾ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ರಾಯಚೂರು ಮತ್ತು ಯಾದಗಿರಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರಾಯಚೂರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿದ್ಯಾಭ್ಯಾಸ ಮತ್ತು ಉದ್ಯಮದ ಅಗತ್ಯತೆ ಮಧ್ಯೆ ಇರುವ ಕೊರತೆಯನ್ನು ನೀಗಿಸಲು ಕೌಶಲ ತರಬೇತಿ ನೀಡಲು ನಮ್ಮ ಸರಕಾರ ‘ಕೌಶಲ ವಿಶ್ವವಿದ್ಯಾಲಯ’ವನ್ನು ಪ್ರಾರಂಭಿಸಲು ಬದ್ಧವಾಗಿದೆ ಎಂದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಾಣಕ್ಕಾಗಿ 20 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಡಾ.ಮಾಂಟೆಕ್‌ಸಿಂಗ್ ಅಹ್ಲುವಾಲಿಯರನ್ನು ಕೌನ್ಸಿಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ತರಗತಿಗಳು ಪ್ರಾರಂಭಿಸಲಾಗುತ್ತಿದ್ದು, ಇದರ ಉದ್ಘಾಟನೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಶೇ.60ರಷ್ಟು ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶೇ.40ರಷ್ಟು ಸೀಟುಗಳು ಹೊರ ರಾಜ್ಯ, ದೇಶದವರಿಗೆ ಮೀಸಲಿಡಲಾಗಿದೆ. ಶೇ.30ರಷ್ಟು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿರುತ್ತಾರೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನೂರಾರು ಕೋಟಿ ರೂ. ಅಕ್ರಮವಾಗಿದೆ. ವಿಟಿಯು ಒಂದರಲ್ಲೆ 200 ಕೋಟಿ ರೂ.ಗಳ ಹಗರಣ ನಡೆದಿದೆ. ವಿವಿಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಹಲವು ಅಧಿಕಾರಗಳಿವೆ. ಹೀಗಾಗಿ, ಸರಕಾರ ಯಾವುದೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಕಾಯ್ದೆ ಜಾರಿ ಮಾಡಲಾಗಿದೆ. 10 ವರ್ಷದಲ್ಲಿ 11 ಕುಲಪತಿಗಳು ವಿವಿಧ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅಮಾನತ್ತು ಆಗಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಧಾರವಾಡದಲ್ಲಿ ಕೇಂದ್ರ ಐಐಟಿ ಸ್ಥಾಪನೆಗೆ ರಾಜ್ಯ ಸರಕಾರವು 470 ಎಕರೆ ಜಮೀನು ನೀಡಿದೆ. ಆದರೆ, ನಮ್ಮ ರಾಜ್ಯದ ಕೇವಲ 6 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಕ್ಕಿದೆ. ಮುಂದಿನ ಕನಿಷ್ಠ ಶೇ.25ರಷ್ಟು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿಕೊಡಬೇಕೆಂದು ಕೇಂದ್ರ ಸರಕಾರಕ್ಕೆ ಆಗ್ರಹಿಸುವುದಾಗಿ ಹೇಳಿದರು.
ವಸತಿ ಕಾಲೇಜುಗಳ ಆರಂಭ
ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇರುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಮುಂಬೈ ಕರ್ನಾಟಕ ಭಾಗದ ಹಾವೇರಿ, ಬಿಜಾಪುರ, ಮಧ್ಯ ಕರ್ನಾಟಕ ಭಾಗದ ಕೋಲಾರ, ಚಿತ್ರದುರ್ಗ, ಚಾಮರಾಜನಗರ ಸೇರಿ 10 ಜಿಲ್ಲೆಗಳಲ್ಲಿ ತಲಾ 25 ಕೋಟಿ ರೂ.ಖರ್ಚು ಮಾಡಿ ಹೊಸ ವಸತಿ ಕಾಲೇಜುಗಳನ್ನು ಬಿಎಸ್ಸಿ, ಬಿಕಾಂ, ಬಿಎ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾಗುತ್ತಿದೆ.
ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ







