ಅಕ್ರಮ ಭೂಮಿ ಮಂಜೂರು: ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು, ಆ.24: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವ ಸಮಿತಿಯು ಅಕ್ರಮವಾಗಿ ಬಿಬಿಎಂಪಿಯ ಕೆಲ ಸದಸ್ಯರಿಗೆ ಭೂಮಿ ಮಂಜೂರು ಮಾಡಿದ್ದು, ಇದಕ್ಕೆ ಸಹಕರಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ(ಮಾಹಿತಿ ತಂತ್ರಜ್ಞಾನ ವಿಭಾಗ) ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಗುರುವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅಧಿಕೃತ ನಿವಾಸಕ್ಕೆ ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ(ಮಾಹಿತಿ ತಂತ್ರಜ್ಞಾನ ವಿಭಾಗ) ಸದಸ್ಯರು ಮನವಿ ಪತ್ರ ನೀಡಿ, ಬೆಂಗಳೂರು ವ್ಯಾಪ್ತಿಯಲ್ಲಿರುವ ಸರಕಾರಿ ಭೂಮಿ ರಕ್ಷಿಸುವಂತೆ ಮನವಿ ಮಾಡಿಕೊಂಡರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಶೇಖರ್, ಬೆಂ.ದಕ್ಷಿಣ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವ ಸಮಿತಿಯು 1994ರಿಂದ ನೂರಾರು ಎಕರೆ ಸರಕಾರಿ ಖರಾಬು ಭೂಮಿಯನ್ನು ಉಳ್ಳವರಿಗೆ ಮಂಜೂರಾತಿ ಮಾಡಿದ್ದಲ್ಲದೆ, ಇದೀಗ ಪಹಣಿಗಳಲ್ಲಿ ಮೂಲ ಮಂಜೂರುದಾರರ ಹೆಸರುಗಳು ನಾಪತ್ತೆಯಾಗುವಂತೆ ನೋಡಿಕೊಂಡಿದೆ ಎಂದು ಆರೋಪಿಸಿದರು.
ಒಂದು ಗ್ರಾಮ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರು ಮಾಡಲು ಲಭ್ಯವಿರುವ ಭೂಮಿಯಲ್ಲಿ ಶೇ. 50 ರಷ್ಟು ಎಸ್ಸಿ-ಎಸ್ಟಿ ಸಮುದಾಯಕ್ಕೆ, 10 ರಷ್ಟು ಮಾಜಿ ಯೋಧರಿಗೆ, 10 ರಷ್ಟು ಸ್ವಾತಂತ್ರ್ಯ ಯೋಧರಿಗೆ, ಇನ್ನುಳಿದ 25 ರಷ್ಟು ಇತರರಿಗೆ ಹಂಚಬೇಕೆಂದು ಕಾನೂನು ಹೇಳಿದೆ. ಆದರೆ, ಈ ಯಾವುದನ್ನು ಪರಿಗಣಿಸದೆ, ಕಾನೂನು ಉಲ್ಲಂಘಿಸಿ ನೀಡಿರುವುದಲ್ಲದೆ, ಬಿಬಿಎಂಪಿ ವ್ಯಾಪ್ತಿಯ 18 ಕಿ.ಮೀಟರ್ ವ್ಯಾಪ್ತಿಯ ಅಂತರ ಇರಬೇಕೆನ್ನುವ ನಿಯಮವೂ ಉಲ್ಲಂಘನೆಯಾಗಿದೆ ಎಂದು ಆಪಾದಿಸಿದರು.
ಅರ್ಜಿ ನಮೂನೆ 53ರಲ್ಲಿ ನಿಗದಿಪಡಿಸಿದ್ದ ಗಡುವಿನ ದಿನಾಂಕದ ನಂತರ ನಗರ ವ್ಯಾಪ್ತಿಯ ಭೂಮಿ ಉಳ್ಳವರು ಸಲ್ಲಿಸಿರುವ ಅರ್ಜಿಯನ್ನು ಕಾನೂನು ಬಾಹಿರವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ ಅವರು, ಸರಕಾರದ ಹೆಸರಿನಲ್ಲಿ ಜಮೀನನ್ನು ಮಂಜೂರಾತಿ ಮಾಡುವ ವೇಳೆ ಪಹಣಿ, ಆರ್‌ಟಿಸಿಗಳಲ್ಲಿ ಇದ್ದ ಹೆಸರುಗಳು ಯಾವ ಆಧಾರದ ಮೇಲೆ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿದೆ ಎನ್ನುವ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಹರ್ ಹುಕುಂ ಸಾಗುವಳಿಯಲ್ಲಿ ಸಕ್ರಮೀಕರಣ ಸಮಿತಿಯಲ್ಲಿ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿಕೊಂಡಿದ್ದು ಈಗ ಮಾರುಕಟ್ಟೆ ಬೆಲೆಯಲ್ಲಿ ಸಾವಿರಾರು ಕೋಟಿ ರೂ. ಬೆಲೆಬಾಳುವ ಭೂಮಿಯಾಗಿದೆ. ಹೀಗಾಗಿ, ಕಂದಾಯ ಇಲಾಖೆ ಮತ್ತು ರಾಜ್ಯ ಸರಕಾರ ಈ ಸಂಬಂಧ ತನಿಖೆ ನಡೆಸಿ, ಭೂಮಿ ವಾಪಾಸು ಪಡೆಯುವುದಲ್ಲದೆ, ದಂಡ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರಾದ ಎಸ್.ಮನೋಹರ್, ಎಂ.ಎ.ಸಲೀಂ, ಶಿವಕುಮಾರ್, ಆನಂದ, ಎಸ್.ಎಂ.ರಾಜು. ವಿಜಯ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.
‘ಕಾನೂನು ಕ್ರಮ ಕೈಗೊಳ್ಳುತ್ತೇನೆ’
ಬೆಂಗಳೂರು ನಗರ ಸುತ್ತಲು ಇರುವ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವ ಸಮಿತಿಯು ಕೃಷಿಯೇತರರಿಗೆ ಭೂಮಿ ಮಂಜೂರು ಮಾಡಿರುವ ಆರೋಪ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಆದೇಶ ನೀಡಲಾಗುವುದು. ಅದೇ ರೀತಿ, ಅಧಿಕಾರಿಗಳು ಸೇರಿ ಯಾರೇ ತಪ್ಪು ಮಾಡಿದ್ದರೂ, ಕಾನೂನು ಕ್ರಮ ಕೈಗೊಳ್ಳುತ್ತೇನೆ.-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ
‘ಮಾಜಿ ಮೇಯರ್ ಮಂಜೂರು ರದ್ದು’
ಬಿಬಿಎಂಪಿ ವಾಜಿ ಮೇಯರ್ ಡಿ.ವೆಂಕಟೇಶ್‌ಮೂರ್ತಿ, ಅವರ ಪತ್ನಿ ಕೆ.ಪ್ರಭಾ ಅವರಿಗೆ ಸೋಮನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 242ಯಲ್ಲಿ ಎಂಟು ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, 2012ನೆ ಸಾಲಿನ ಜೂ.8 ರಂದು ಮಂಜೂರಾತಿ ರದ್ದುಗೊಳಿಸುವಂತೆ ಉಪವಿಭಾಗಧಿಕಾರಿ ಆದೇಶ ಹೊರಡಿಸಿದ್ದರು. ಅದೇ ರೀತಿ, ಅಕ್ರಮವಾಗಿ ಭೂಮಿ ಪಡೆದಿರುವ ಆದೇಶವನ್ನು ರದ್ದುಗೊಳಿಸುವಂತೆ ಸಮಿತಿ ಮನವಿ ಮಾಡಿದೆ.







