ಬೆಂವಿವಿ: ಭೌಗೋಳಿಕ ಮಾಹಿತಿ ವಿಜ್ಞಾನ ವಿಷಯ ಸೇರ್ಪಡೆ
ಬೆಂಗಳೂರು, ಆ.24: ಬೆಂಗಳೂರು ವಿಶ್ವವಿದ್ಯಾನಿಲಯವು ಭೂಗೋಳಶಾಸ್ತ್ರ ವಿಭಾಗದಲ್ಲಿ ‘ಭೌಗೋಳಿಕ ಮಾಹಿತಿ ವಿಜ್ಞಾನ’(ಎಂಎಸ್ಸಿ) ಹೊಸ ವಿಷಯವನ್ನು ಪರಿಚಯಿಸಿದ್ದು, ಉಪಕುಲಪತಿ ಪ್ರೊ.ಎನ್.ರಮೇಶ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಲಾವಿಭಾಗದಿಂದ ವಿಜ್ಞಾನ ವಿಭಾಗಕ್ಕೆ ಬಂದಿರುವ ಭೌಗೋಳಿಕ ಮಾಹಿತಿ ವಿಜ್ಞಾನಕ್ಕೆ ಹೆಚ್ಚಿನ ತಾಂತ್ರಿಕ ಪ್ರಗತಿ ಒದಗಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿರವ ಎಲ್ಲ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಬಿ.ಕೆ.ರವಿ ಮಾತನಾಡಿ, ಭೌಗೋಳಿಕ ಮಾಹಿತಿ ವಿಜ್ಞಾನದಲ್ಲಿ ಎಂಎಸ್ಸಿ ವಿಷಯ ನಮ್ಮ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ವಿಭಾಗದಲ್ಲಿ ಮಾತ್ರವಿದ್ದು, ಇದು ಸ್ವಯಂ ಹಣಕಾಸು ಮೂಲಕ ಪರಿಚಯಿಸಲ್ಪಟ್ಟ ಏಕೈಕ ಸ್ನಾತಕೋತ್ತರ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭೂಗೋಳಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಅಶೋಕ್ ಡಿ ಹಂಜಗಿ ಮಾತನಾಡಿ, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ‘ಭೌಗೋಳಿಕ ಮಾಹಿತಿ ವಿಜ್ಞಾನ’ ಹೊಸ ವಿಷಯವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎ.ಎಸ್.ರಾಯಮನೆ ಮಾತನಾಡಿ, ಭೌಗೋಳಿಕ ಮಾಹಿತಿ ವಿಜ್ಞಾನ ವಿಷಯ ಸ್ವಯಂ ಉದ್ಯೋಗ ಮತ್ತು ಖಾಸಗಿ ಕಂಪೆನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಪ್ರಸ್ತುತ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ಎಲ್ಲ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳಿಗೆ ಭೌಗೋಳಿಕ ಮಾಹಿತಿ ವಿಜ್ಞಾನವು ಪೂರಕವಾಗಿ ಸ್ಪಂದಿಸಲಿದೆ ಎಂದರು.







