ಸ್ವಘೋಷಿತ ದೇವಮಾನವ ಸ್ವಾಮಿ ಓಂಗೆ ದಂಡ ವಿಧಿಸಿದ ಸುಪ್ರೀಂ

ಹೊಸದಿಲ್ಲಿ, ಆ.24: ದೀಪಕ್ ಮಿಶ್ರಾರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿರುವ ಸ್ವಘೋಷಿತ ದೇವಮಾನವ ಸ್ವಾಮಿ ಓಂ ಅವರಿಗೆ ಸುಪ್ರೀಂಕೋರ್ಟ್ 10 ಲಕ್ಷ ರೂ. ದಂಡ ವಿಧಿಸಿದೆ.
ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ‘ನಿರುಪಯುಕ್ತ’ ಎಂದು ವ್ಯಾಖ್ಯಾನಿಸಿದ ನ್ಯಾಯಾಲಯ, ಸ್ವಾಮಿ ಹಾಗೂ ಮುಕೇಶ್ ಜೈನ್ ಇಬ್ಬರಿಗೂ ತಲಾ 10 ಲಕ್ಷ ರೂ. ದಂಡ ವಿಧಿಸಿತು.
ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ‘ಬಿಗ್‌ಬಾಸ್’ನಲ್ಲಿ ಭಾಗವಹಿಸಿದ್ದ ಸ್ವಾಮಿಯನ್ನು ಸಹ ಕಲಾವಿದೆಯೋರ್ವರ ಜೊತೆ ಅನುಚಿತ ವರ್ತನೆ ತೋರಿದ್ದ ಕಾರಣ ಕಾರ್ಯಕ್ರಮದಿಂದ ಉಚ್ಛಾಟಿಸಲಾಗಿತ್ತು. ಬಳಿಕ ದಿಲ್ಲಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರ ಸಂದರ್ಭ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದ ಸ್ವಾಮಿಯನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಫೆಬ್ರವರಿಯಲ್ಲಿ ಸ್ವಾಮಿ ಮತ್ತು ಆತನ ಸಹಚರನ ವಿರುದ್ಧ ಮತ್ತೋರ್ವ ಮಹಿಳೆ ದೂರು ನೀಡಿದ್ದು ಇವರಿಬ್ಬರು ರಾಜ್‌ಘಾಟ್ ಪ್ರದೇಶದಲ್ಲಿ ಸಾರ್ವಜನಿಕವಾಗಿ ತನ್ನನ್ನು ಪೀಡಿಸಿ ಸೀರೆಯನ್ನು ಹರಿದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಜೆಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ವಾಮಿಯನ್ನು ಕ್ರೈಂಬ್ರಾಂಚ್ ಪೊಲೀಸರು ಇತ್ತೀಚೆಗೆ ದಿಲ್ಲಿಯ ಭಜನ್‌ಪುರ ಪ್ರದೇಶದಿಂದ ಬಂಧಿಸಿದ್ದರು.





