ಹೂವಿನ ಕೊರತೆ-ತರಕಾರಿಗಳ ಬೆಲೆಯಲ್ಲಿ ಹೆಚ್ಚಳ!
ಮಂಗಳೂರು ನಗರದಲ್ಲಿ ಗಣೇಶ ಚತುರ್ಥಿಗೆ ಭರದ ಖರೀದಿ

ಮಂಗಳೂರು, ಆ.24: ಗಣೇಶ ಚತುರ್ಥಿಯ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಕಬ್ಬು, ಹೂವು, ಹಣ್ಣು ಹಂಪಲು ಹಾಗೂ ತರಕಾರಿಗಳ ಖರೀದಿಗೆ ಜನ ಜಂಗುಳಿ ಕಂಡುಬಂತು.
ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಿಂದ ನಗರಕ್ಕೆ ಹೂವು ಸರಬರಾಜಾಗುತ್ತಿದ್ದು, ಅಲ್ಲಿಯ ಮಳೆಯ ಹಿನ್ನೆಲೆಯಲ್ಲಿ ಹೂವಿನ ಕೊರತೆ ಕಾಣಿಸಿಕೊಂಡಿರುವುದರಿಂದ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಹಾಗಿದ್ದರೂ ಗ್ರಾಹಕರು ವ್ಯಾಪಾರಿಗಳ ಜತೆ ಚೌಕಾಸಿ ಮಾಡಿಕೊಂಡು ಹಬ್ಬಕ್ಕೆ ಹೂವು ಹಣ್ಣುಹಂಪಲುಗಳನ್ನು ಖರೀದಿಸಿದರು.
'ಈ ಬಾರಿ ನಗರಕ್ಕೆ ಸರಬರಾಜಾಗುವ ಹೂವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಾಗಾಗಿ ಬೆಲೆ ಹೆಚ್ಚಾಗಿದೆ. ಆದರೆ ವ್ಯಾಪಾರ ಮಾತ್ರ ಸಾಕಷ್ಟಿದೆ. ಹಬ್ಬಕ್ಕಾಗಿ ವಿಶೇಷ ರೀತಿಯ ನಾನಾ ತರದ ಹೂವಿನ ಮಾಲೆಗಳು, ಮಲ್ಲಿಗೆ, ಸೇವಂತಿಗೆ, ಅರಳಿ, ಅಬ್ಬಲಿಗೆ, ಕಾಕಡ, ಗುಲಾಬಿ, ಹಿಂಗಾರ, ಶುಂಠಿ ಗಿಡ, ಕಬ್ಬು ಮೊದಲಾದ ಹೂವುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ' ಎಂದು ನಗರದ ಹೂವಿನ ವ್ಯಾಪಾರಿಯೊಬ್ಬರ ಅಭಿಪ್ರಾಯ.
ಇತ್ತ ಕೇಂದ್ರ ಮಾರುಕಟ್ಟೆಯ ಸುತ್ತಮುತ್ತಲೆಲ್ಲಾ ಹಬ್ಬ ಖರೀದಿಗಾಗಿ ಜನಜಂಗುಳಿಯೇ ಸೇರಿತ್ತು.







