ಖಾಸಗಿತನ ಮೂಲಭೂತ ಹಕ್ಕೆಂಬ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಪರಿಣಾಮಗಳಿವು…

ಹೊಸದಿಲ್ಲಿ,ಆ.24: ನೂರು ಕೋಟಿಗೂ ಅಧಿಕ ಭಾರತೀಯರ ಬದುಕಿನ ಮೇಲೆ ಮಹತ್ವದ ಪರಿಣಾಮ ಬೀರಲಿರುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಪ್ರಕಟಿಸಿದ್ದು, ಖಾಸಗಿತನದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕೆಂದು ಘೋಷಿಸಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ 9 ಮಂದಿ ಸದಸ್ಯರ ನ್ಯಾಯಪೀಠವು ಅವಿರೋಧವಾಗಿ ಈ ತೀರ್ಪನ್ನು ನೀಡಿದೆ.
ಇಂದಿನ ತೀರ್ಪಿನ ಪರಿಣಾಮಗಳು
1. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಕೇಂದ್ರಸರಕಾರದ ನಿಲುವಿನ ಮೇಲೆ, ಸುಪ್ರೀಂಕೋರ್ಟ್ ತೀರ್ಪು ಪ್ರತಿಕೂಲ ಪರಿಣಾಮ ಬೀರಲಿದೆ. 100 ಕೋಟಿಗೂ ಅಧಿಕ ಪ್ರಜೆಗಳ ಬೆರಳಚ್ಚು ಹಾಗೂ ಕಣ್ಣಿನ ಸ್ಕಾನ್‌ಗಳನ್ನು ಸಂಗ್ರಹಿಸುವುದು ಖಾಸಗಿತನದ ಉಲ್ಲಂಘನೆಯಾಗಿದೆಯೆಂದು ಅರ್ಜಿದಾರರ ವಾದವಾಗಿತ್ತು.
2. ವೈಯಕ್ತಿಕ ಮಾಹಿತಿಯ ದುರ್ಬಳಕೆಯ ವಿರುದ್ಧ ನಾಗರಿಕರಿಗೆ ರಕ್ಷಣೆ ದೊರೆಯಲಿದೆ.
3.ವಾಟ್ಸ್‌ಆಪ್,ಫೇಸ್‌ಬುಕ್ ಸಂಸ್ಥೆಗಳು ಬಳಕೆದಾರರ ಮಾಹಿತಿಗಳನ್ನು ಅನುಮತಿಯಿಲ್ಲದೆ ಪಡೆಯುತ್ತಿರುವುದನ್ನು ಪ್ರಶ್ನಿಸಿರುವ ಪ್ರಕರಣ ಸೇರಿದಂತೆ ಇತರ ಹಲವಾರು ಪ್ರಕರಣಗಳ ಮೇಲೂ ಸುಪ್ರೀಂಕೋರ್ಟ್ ತೀರ್ಪು ಪರಿಣಾಮ ಬೀರುವ ಸಾಧ್ಯತೆಯಿದೆ.
3. ಖಾಸಗಿತನವು ಬದುಕುವ ಹಕ್ಕಿನ ಹಾಗೂ ಖಾಸಗಿ ಸ್ವಾತಂತ್ರದ ಸಹಜ ಭಾಗವಾಗಿದೆಯೆಂದು ಎಂದು ಇಂದಿನ ತೀರ್ಪು ತಿಳಿಸಿರುವುದರಿಂದ, ಸಲಿಂಗಕಾಮ ವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ಆದೇಶ ಕೂಡಾ ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಡುವ ಸಾಧ್ಯತೆಯಿದೆ.
4. ಫಾರೆನ್ಸಿಕ್ ಪರೀಕ್ಷೆಯ ಉದ್ದೇಶಗಳಿಗಾಗಿ ಡಿಎನ್‌ಎ ದತ್ತಾಂಶಗಳ ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಅವಕಾಶ ನೀಡುವ 2017ರ ಡಿಎನ್‌ಎ ಆಧಾರಿತ ತಂತ್ರಜ್ಞಾನ ವಿಧೇಯಕದ ಮೇಲೂ ಇಂದಿನ ತೀರ್ಪು ಪ್ರತಿಕೂಲ ಪರಿಣಾಮ ಬೀರಲಿದೆ.







