ಪುಸ್ತಕಗಳು ಮನುಷ್ಯನ ಬದುಕಿಗೆ ಆಸರೆ ನೀಡುತ್ತವೆ: ಜಯಶ್ರೀ ಮೊಗೇರ್

ಭಟ್ಕಳ, ಆ. 24: ಪುಸ್ತಕಗಳು ಮನುಷ್ಯನ ಬದುಕಿಗೆ ನಿಜವಾಗಿ ಆಸರೆಯಾಗುವ ಸಂಗಾತಿ. ಅಂತಹ ಪುಸ್ತಕದ ಸಾಂಗತ್ಯ ಅತ್ಯಂತ ಶ್ರೇಷ್ಠವಾದುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ಹೇಳಿದರು.
ಅವರು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೀಪಾ ಬುಕ್ ಹೌಸ್ ಪುತ್ತೂರು ಇವರ ಸಹಯೋಗದಲ್ಲಿ ಆಯೋಜಿಸಲಾದ ಪುಸ್ತಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕದ ಓದು ನೀಡುವ ಖುಷಿ, ಮೊಬೈಲ್ ಅಥವಾ ಅಂತರ್ಜಾಲಗಳಿಂದ ಸಿಗಲಾರದು. ಶಾಲಾ ಮಕ್ಕಳಿಂದ ಆದಿಯಾಗಿ ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಹೊತ್ತಗೆಯು ನಮ್ಮ ಬದುಕಿನ ಎಲ್ಲ ಹೊತ್ತಿಗೆ ನಮ್ಮ ಜೊತೆಗೆ ಇರುವ ಮಿತೃ. ಯಾವ ಪ್ರತಿ ಫಲಾಪೇಕ್ಷೆ ಇಲ್ಲದೇ, ಇಟ್ಟಲ್ಲಿ ಇರುವ ಬೇಕೆಂದಾಗ ಕೈಗೆ ಬರುವ ಗೆಳೆಯ. ಯಾರು ಪುಸ್ತಕದ ಗೆಳೆತನ ಹೊಂದಿರುತ್ತಾರೋ ಆವರೆಂದೂ ಒಂಟಿತನ ಅನುಭವಿಸಲಾರರು ಎಂದರು. ಕಸಾಪ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ ಸ್ವಾಗತಿಸಿ ವಂದಿಸಿದರು.
ವೇದಿಕೆಯಲ್ಲಿ ಸ.ಮಾ.ಕ. ಗಂಡು ಮಕ್ಕಳ ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕಿ ಮಾಲತಿ ಕೆ, ದೀಪಾ ಬುಕ್ ಹೌಸ್‌ನ ಸತ್ಯಮೂರ್ತಿ ಹೆಬ್ಬಾರ್, ಮಂಜುನಾಥ್ ಉಪಸ್ಥಿತರಿದ್ದು, ಅತಿಥಿಗಳಿಗೆ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.







