ಮಧ್ಯ ನಿಷೇಧ ಪುರಸಭೆ ಪ್ರದೇಶಕ್ಕೆ ಅನ್ವಯಿಸದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಆ. 24: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ 500 ಮೀಟರ್ ಅಂತರದಲ್ಲಿ ದೇಶದಾದ್ಯಂತ ಮದ್ಯ ಮಾರಾಟ ನಿಷೇಧಿಸಿರುವ ಸುಪ್ರೀಂ ಕೋರ್ಟ್, ಈ ನಿಷೇಧವನ್ನು ಪುರಸಭೆ ಪ್ರದೇಶಕ್ಕೆ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸುಪ್ರೀಂ ಕೋರ್ಟ್ ಜುಲೈ 11ರಂದು ನೀಡಿದ ಆದೇಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಪುರಸಭೆ ಪ್ರದೇಶದಲ್ಲಿರುವ ಪರವಾನಿಗೆ ಹೊಂದಿದ ಬಾರ್ ಹಾಗೂ ಹೊಟೇಲ್‌ಗಳಿಗೆ 500 ಮೀಟರ್ ನಿಷೇಧ ಅನ್ವಯವಾಗುವುದಿಲ್ಲ ಎಂದು ಹೇಳಿದೆ.
ಚಂಢೀಗಢ ನಗರಾಡಳಿತದ 2017 ಮಾರ್ಚ್ 16ರ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ಈ ಸ್ಪಷ್ಟನೆ ನೀಡಿದೆ.
ಜು. 11ರಂದು ಮನವಿ ತಿರಸ್ಕರಿಸಿರುವ ಪೀಠ ತನ್ನ ಆದೇಶವನ್ನು ಬುಧವಾರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಡಿಸೆಂಬರ್ 15ರ ಆದೇಶದ ಬಳಿಕ ಬಾರ್ ಹಾಗೂ ಹೊಟೇಲ್‌ಗಳನ್ನು ಬಂದ್ ಮಾಡಿದ ಮಾಲಕರಿಗೆ ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ನೆಮ್ಮದಿ ದೊರಕಿದಂತಾಗಿದೆ.





