ಬೈಕ್ ಕಳವು ಪ್ರಕರಣ: ಓರ್ವನ ಬಂಧನ
.jpg)
ಹನೂರು, ಆ.24: ಮೈಸೂರು ಸೇರಿದಂತೆ ಇನ್ನಿತರ ಕಡೆಗಳಿಂದ ಬೈಕ್ ಕಳವು ಮಾಡಿ ಮಾರಾಟಮಾಡುತ್ತಿದ್ದ ಆರೋಪಿಯನ್ನು ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹನೂರು ಪಟ್ಟಣ ಮೂಲದ ಬಸಪ್ಪನದೊಡ್ಡಿ ನಿವಾಸಿ ಅಬ್ಜಲ್ ಬಾಬು(48) ಎಂದು ತಿಳಿದು ಬಂದಿದೆ.
ಅಬ್ಜಲ್ ಬಾಬು ಬುಧವಾರ ಮಧ್ಯಾಹ್ನ 1 ಸುಮಾರಿಗೆ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಟಿವಿಎಸ್ ಬೈಕಿನಲ್ಲಿ ತಿರುಗಾಡುತ್ತಿದ್ದನು. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೈಕ್‍ಗಳನ್ನು ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈತ ಕಳೆದ 3 ವರ್ಷಗಳಿಂದ ಮೈಸೂರಿನ ಕೆ.ಆರ್.ಮೊಹಲ್ಲಾ, ಸುಣ್ಣದಕೇರಿ, ಜೈನ್‍ಭವನ, ಲಕ್ಷ್ಮೀಟಾಕೀಸ್ ಸೇರಿದಂತೆ ವಿವಿಧೆಡೆಗಳಿಂದ ಬೈಕ್ ಕಳವು ಮಾಡಿ ಬಸಪ್ಪನದೊಡ್ಡಿಯಲ್ಲಿ 4 ಬೈಕು, ಅಜ್ಜೀಪುರದಲ್ಲಿ 1 ಬೈಕು ಮಾರಾಟ ಮಾಡಿ ಮತ್ತೊಂದು ಬೈಕನ್ನು ಸ್ವಂತ ಉಪಯೋಗಕ್ಕೆ ಬಳಸುತ್ತಿದ್ದನು ಎನ್ನಲಾಗಿದೆ.
ಈ ಸಂಬಂಧ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಎಡಿಎಸ್‍ಪಿ ಗೀತಾ ಮತ್ತು ಡಿವ್ಯೆಸ್ಪಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಸುಮಾರು 1.18ಲಕ್ಷ ರೂ. ಮೌಲ್ಯದ 6 ಟಿವಿಎಸ್ ಮೊಪೆಡ್ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಸಿಪಿಐ ಪರಶುರಾಮ್, ಸಿಬ್ಬಂದಿ ಲಿಂಗರಾಜು, ಲಿಯಾಖತ್ ಅಲಿಖಾನ್, ಸಿದ್ದೇಶ್‍ಕುಮಾರ್, ವಾಸುನಾಯಕ್, ರಾಮಶೆಟ್ಟಿ, ಮಾದೇವು ಮತ್ತು ಚಾಲಕ ನಾಗರಾಜು ಭಾಗವಹಿಸಿದ್ದರು.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಸಿಪಿಐ ಪರಶುರಾಮ್, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಶಕ್ಕೆ ಪಡೆದಿರುವ ಬೈಕುಗಳನ್ನು ಕೃತ್ಯ ನಡೆದ ಸ್ಥಳ, ಪ್ರಕರಣದ ಆಧಾರದ ಮೇಲೆ ಸಂಬಂಧಪಟ್ಟ ಠಾಣೆಗಳಿಗೆ ವರ್ಗಾವಣೆ ಮಆಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.







