ಬಂಟ್ವಾಳದ 10 ಕಡೆಗಳಲ್ಲಿ ’ಮಾನವ ಸರಪಳಿ’ ಕಾರ್ಯಕ್ರಮ
ಬಂಟ್ವಾಳ, ಆ. 24: ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ’ಮನೆಯಿಂದ ಹೊರಗೆ ಬನ್ನಿ’ ಘೋಷಣೆಯೊಂದಿಗೆ ರಾಷ್ಟ್ರಾದ್ಯಂತ ಏಕ ಕಾಲಕ್ಕೆ ಹಮ್ಮಿಕೊಂಡಿರುವ ’ಮಾನವ ಸರಪಳಿ’ ಕಾರ್ಯಕ್ರಮ ಆ.25ರಂದು ಮಧ್ಯಾಹ್ನ 2 ಗಂಟೆಯಿಂದ 2:30ರ ತನಕ ಬಂಟ್ವಾಳ ತಾಲೂಕಿನ 10 ಕಡೆಗಳಲ್ಲಿ ನಡೆಯಲಿದೆ.
ತಾಲೂಕಿನ ಫರಂಗಿಪೇಟೆ, ತುಂಬೆ, ತಲಪಾಡಿ, ಕೈಕಂಬ, ಬಿ.ಸಿ.ರೋಡ್, ನಂದಾವರ, ಅಗ್ರಹಾರ, ಸಜೀಪ, ಕಲ್ಲಡ್ಕ, ವಿಟ್ಲದ ಪ್ರಮುಖ ರಸ್ತೆಗಳಲ್ಲಿ ’ಮಾನವ ಸರಪಳಿ’ ನಡೆಸುವ ಮೂಲಕ ಐಕ್ಯಮತ ಪ್ರದರ್ಶಿಸಲಾಗುವುದು. ಜುಮಾ ನಮಾರ್ ಮುಗಿದ ಬಳಿಕ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಆಯಾಯ ಪ್ರದೇಶದ ಪ್ರಮುಖ ರಸ್ತೆಯುದ್ದಕ್ಕೆ ಹತ್ತು ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸುವ ಸಂದೇಶವನ್ನು ನೀಡಲಾಗುವುದು ಎಂದು ಬಂಟ್ವಾಳ ಸ್ವಾಗತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಗೋವು ಸಹಿತ ಇತರ ವಿಚಾರಗಳ ಹೆಸರಿನಲ್ಲಿ ಅಮಾಯಕರನ್ನು ಗುಂಪು ಸೇರಿ ಹತ್ಯೆ ನಡೆಸುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದೆ. ಇತ್ತೀಚಿಗಿನ ವರದಿಯಂತೆ ದೇಶದಲ್ಲಿ 38 ಗುಂಪು ಹತ್ಯಾ ಪ್ರಕರಣ ನಡೆದಿದ್ದು ಇವುಗಳ ಪೈಕಿ 31 ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಯುವಕರು ಹತ್ಯೆಯಾಗಿದ್ದಾರೆ. ಈ ಅಭಿಯಾನ ಯಾವುದೇ ಸಂಘಟನೆ, ಪಕ್ಷದ ಅಡಿಯಲ್ಲಿ ನಡೆಯದೆ ಇದೊಂದು ಜನತೆಯ ಅಭಿಯಾನವಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಸ್ವಿಗೊಳಿಸುವಂತೆ ಪ್ರಕಟನೆ ತಿಳಿಸಿದೆ.







