ಆಳ್ವಾಸ್‌ನಲ್ಲಿ ಪೋಸ್ಟರ್ ತಯಾರಿ ಸ್ಪರ್ಧೆ, ಪ್ರದರ್ಶನ
.jpg)
ಮೂಡಬಿದಿರೆ, ಆ. 24: ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಎಂ.ಕಾಂ ವಿಭಾಗ ವಿದ್ಯಾರ್ಥಿಗಳಿಗಾಗಿ ಪೋಸ್ಟರ್ ತಯಾರಿಸುವ ಸ್ಪರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಆಳ್ವಾಸ್ ಸ್ನಾತ್ತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನರಾಮ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಾರಂಭದ ದಿನಗಳಲ್ಲಿ ಪೋಸ್ಟರ್‌ಗಳನ್ನು ಮಾಹಿತಿಯ ಖಣಜವಾಗಿ, ಜನರನ್ನು ವಿದ್ಯಾವಂತರನ್ನಾಗಿಸುವ ಕೆಲಸದಲ್ಲಿ ತೊಡಗಿದ್ದವು. ನಂತರದ ದಿನಗಳಲ್ಲಿ ಪೋಸ್ಟರ್‌ಗಳನ್ನು ಪ್ರಚಾರ ಮತ್ತು ಜಾಹೀರಾತಿನ ಸಾಧನಗಳಾಗಿ ಬಳಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ ಪೋಸ್ಟರ್ ಮಾಹಿತಿಯನ್ನು ನೀಡುವುದರ ಜೊತೆಗೆ, ಜಾಹೀರಾತಿನ ಪ್ರಮುಖ ಅಸ್ತ್ರವಾಗಿ ಬಳಸಲಾಗುತ್ತಿದೆ. ಪೋಸ್ಟರ್ ವಿನ್ಯಾಸ, ಅಕ್ಷರಗಳ ಜೋಡಣೆ, ಪದಗಳ ಬಳಕೆ, ಬಳಸುವ ಬಣ್ಣ, ಮಾಹಿತಿಯ ನಿಖರತೆ, ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪೋಸ್ಟರ್‌ಗಳನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚು ಪರಿಣಾಮಕಾರಿ ಬೀರುವ ಮಾಧ್ಯಮವಾಗಿ ಬಳಸಿಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳ ಕ್ರಿಯಾಶಿಲತೆಗೆ ಕೈಗನ್ನಡಿಯಂತಿರುವ ಈ ಕಲೆಯನ್ನು ಸಮರ್ಪಕವಾಗಿ ಬಳಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಫಲಿತಾಂಶ: ದ್ವಿತೀಯ ಎಂ.ಕಾಂನ ವಿದ್ಯಾರ್ಥಿ ಶ್ರುತಿ ಭಟ್ ತಯಾರಿಸಿದ ಪೋಸ್ಟರ್ ಪ್ರಥಮ, ವಿದ್ಯಾಶ್ರೀ ದ್ವಿತೀಯ, ಸಾಗರ್ ಹಾಗೂ ವೀಣಾ ಜಾಸ್ಲಿನ್ ಪೀಟೋ ತೃತೀಯ ಸ್ಥಾನವನ್ನು ಪಡೆದರು.
‘ಈ-ಕಾಮರ್ಸ್’ ವಿಷಯದ ಅಡಿಯಲ್ಲಿ ಪೋಸ್ಟರ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮಿಂತ್ರಾ, ಅಮೇಜಾನ್, ಎಬೋರ್, ಶೋಪ್‌ಕ್ಲೂಸ್, ಶಿಕ್ಷ.ಕೋಮ್, ಏರಟೆಲ್, ಜಾಬಂಗ್, ನೌಕ್ರಿ.ಕೋಮ್, ರೆಡ್ಬಸ್, ಸ್ಯಾಪ್ಡೀಲ್, ಏಪ್ಮೀ,ಪೇಟಿಎಂ, ಮೋಬಿಬಿಕ್, ಟೆಪ್‌ಜೋ, ಯುಪಿಐ, ಸನ್ ನೆಕ್ಸ್ಟ್, ಎಬೋಫ್ ವಿಷಯಗಳ ಪೋಸ್ಟರ್‌ಗಳನ್ನು ತಯಾರಿಸಿದ್ದರು.
ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಎಂ.ಕಾಂ ವಿಭಾಗದ ಮುಖ್ಯಸ್ಥ ಪವನ್ ಕಿರಣ್‌ಕೆರೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಳು ಇಂತಹ ವೇದಿಕೆಯಲ್ಲಿ ವ್ಯಕ್ತವಾಗಬೇಕು, ಹಾಗೂ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಉಪನ್ಯಾಸಕಿ ರೇಖಾ ಉಪಸ್ಥಿತರಿದ್ದರು. ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಜೆನಿಷಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು.







