ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಶಿಶುಗಳ ಮರಣಕ್ಕೆ ಅಪೌಷ್ಟಿಕತೆಯೇ ಕಾರಣ: ವಿ.ಎಸ್.ಉಗ್ರಪ್ಪ

ಬೆಂಗಳೂರು, ಆ.24: ಇತ್ತೀಚಿನ ಕೆಲವು ತಿಂಗಳುಗಳಿಂದ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಶಿಶುಗಳ ಮರಣಕ್ಕೆ ಅಪೌಷ್ಟಿಕತೆಯೇ ಪ್ರಮುಖ ಕಾರಣವಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎಂಟು ತಿಂಗಳಿನಿಂದ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 90ಮಂದಿ ಶಿಶುಗಳು ಮರಣ ಹೊಂದಿವೆ. ಈ ಸಾವಿಗೆ ಶೇ.80ರಷ್ಟು ಅಪೌಷ್ಟಿಕತೆಯೇ ಪ್ರಮುಖ ಕಾರಣವಾಗಿದೆ ಎಂದು ಆಸ್ಪತ್ರೆಗಳ ಅಂಕಿ ಅಂಶ ದೃಢಪಡಿಸಿವೆ ಎಂದು ತಿಳಿಸಿದರು.
ಕೋಲಾರದಲ್ಲಿ ಒಟ್ಟು 13793 ಗರ್ಭಿಣಿ ಹಾಗೂ 14329 ಬಾಣಂತಿ ಸ್ತ್ರೀಯರಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ 3,292 ಹೆರಿಗೆಗಳಾಗಿವೆ. ಅದರಲ್ಲಿ 1045 ಶಿಶುಗಳು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, 90ಶಿಶುಗಳು ಮರಣ ಹೊಂದಿವೆ. ಈ ಸಾವಿಗೆ ಗರ್ಭಿಣಿ ಸ್ತ್ರೀಯರ ಬಡತನ ಸೇರಿದಂತೆ ಹಲವಾರು ಕಾರಣಗಳಿವೆ ಎಂದು ಹೇಳಿದರು.
ಶಿಶುವನ್ನು ಕಳೆದುಕೊಂಡ ಮಹಿಳೆಯರ ಆರೋಗ್ಯದ ಪರಿಸ್ಥಿತಿ ತೀರ ಶೋಚನೀಯವಾಗಿದೆ. ಹೀಗಾಗಿ ಅವರಿಗೆ ಹುಟ್ಟಿದ ಶಿಶುಗಳು ಕೇವಲ ಒಂದು ಕೆಜಿ ಹಾಗೂ ಅದಕ್ಕಿಂತಲೂ ಕಡಿಮೆ ತೂಕವನ್ನು ಹೊಂದಿದ್ದವು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಲಾಗಿದ್ದರೂ ಮರಣ ಹೊಂದಿವೆ ಎಂದರು.
ಗರ್ಭಿಣಿ ಹಾಗೂ ಬಾಣಂತಿ ಸ್ತ್ರೀಯರಿಗೆ ಸೂಕ್ತ ಚಿಕಿತ್ಸೆ ನೀಡುವಂತಹ ನುರಿತ ವೈದ್ಯರು ಹಾಗೂ ಸೌಲಭ್ಯಗಳು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿದೆ. ನಾಲ್ಕು ಮಂದಿ ಶಿಶು ತಜ್ಞ ವೈದ್ಯರಿದ್ದಾರೆ. ವೆಂಟಿಲೇಟರ್ ಹಾಗೂ ದಿನಪೂರ್ತಿ ಆಮ್ಲಜನಕ ಪೂರೈಕೆಯ ವ್ಯವಸ್ಥೆಯಿದೆ. ಹೀಗಾಗಿ ಶಿಶುಗಳ ಮರಣಕ್ಕೆ ಆಸ್ಪತ್ರೆಯ ವೈದ್ಯರನ್ನು ಕಾರಣರನ್ನಾಗಿಸಲು ಬರುವುದಿಲ್ಲ ಎಂದ ಅವರು, ಜಗತ್ತಿನಲ್ಲಿ ಒಂದು ಸಾವಿರ ಶಿಶುಗಳಿಗೆ 49 ಶಿಶುಗಳು ಸಾವನ್ನಪ್ಪುತ್ತಿವೆ. ಭಾರತದಲ್ಲಿ ಒಂದು ಸಾವಿರ ಶಿಶುಗಳಿಗೆ 40 ಹಾಗೂ ರಾಜ್ಯದಲ್ಲಿ 30 ಶಿಶುಗಳು ಸಾವನ್ನಪ್ಪುತ್ತಿವೆ. ಹಾಗೆ ನೋಡಿದರೆ ಕೋಲಾರದಲ್ಲಿ 30 ಕ್ಕಿಂತಲೂ ಕಡಿಮೆ ಶಿಶುಗಳು ಸಾವನ್ನಪ್ಪುತ್ತಿವೆ. ಆದರೆ, ಕಳೆದ ಎಂಟು ತಿಂಗಳಲ್ಲಿ ಮಾತ್ರ ಶಿಶುಗಳ ಮರಣದಲ್ಲಿ ಹೆಚ್ಚಳವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವಿರೋಧ ಪಕ್ಷವಾಗಿ ಬಿಜೆಪಿ ಸತ್ತಿದೆ
ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಶಿಶುಗಳ ಮರಣದಲ್ಲೂ ಬಿಜೆಪಿ ರಾಜಕೀಯ ಮಾಡುವುದರ ಮೂಲಕ ತನ್ನ ರಾಜಕೀಯ ದಿವಾಳಿತವನ್ನು ಬಹಿರಂಗ ಪಡಿಸಿದೆ. ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲದೆ ಶಿಶುಗಳ ಮರಣಕ್ಕೆ ವಿನಾಕಾರಣ ಸರಕಾರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕೇವಲ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಮೆಚ್ಚಿಸುವುದಕ್ಕಾಗಿ ತೋರಿಕೆಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಹಾಗೆ ನೋಡಿದರೆ ರಾಜ್ಯದಲ್ಲಿ ವಿರೋಧ ಪಕ್ಷ ಸತ್ತಿದೆ.
-ವಿ.ಎಸ್.ಉಗ್ರಪ್ಪ ಅಧ್ಯಕ್ಷ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ







