ದೇಶದಲ್ಲಿ ಹಂದಿಜ್ವರದಿಂದ 8 ತಿಂಗಳುಗಳಲ್ಲಿ ಮೃತಪಟ್ಟವರ ಸಂಖ್ಯೆಯೆಷ್ಟು ಗೊತ್ತೇ?

ಹೊಸದಿಲ್ಲಿ, ಆ. 24: ಭಾರತದಲ್ಲಿ ಕಳೆದ 8 ತಿಂಗಳುಗಳಲ್ಲಿ ಹಂದಿ ಜ್ವರದಿಂದ ಮೃತಪಟ್ಟವರ ಸಂಖ್ಯೆಯನ್ನು ಗಮನಿಸಿದರೆ ದೇಶದಲ್ಲಿ H1 N1 ಪ್ರಮಾಣ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎನ್ನುವುದು ತಿಳಿದುಬರುತ್ತದೆ. ಕಳೆದ 8 ತಿಂಗಳುಗಳಲ್ಲಿ ದೇಶದಲ್ಲಿ ಹಂದಿ ಜ್ವರದಿಂದ 1,094 ಜನರು ಮೃತಪಟ್ಟಿದ್ದಾರೆ. ಕಳೆದ ಮೂರು ವಾರಗಳಲ್ಲಿ 342 ಸಾವು ಸಂಭವಿಸಿದೆ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸಂಖ್ಯೆ ಯ ಹಂದಿ ಜ್ವರದ ಪ್ರಕರಣಗಳು ಕಂಡು ಬಂದಿವೆ. ಹಂದಿ ಜ್ವರದಿಂದಾಗಿ ಮಹಾರಾಷ್ಟ್ರದಲ್ಲಿ 437 ಹಾಗೂ ಗುಜರಾತ್‌ನಲ್ಲಿ 267 ಮಂದಿ ಮೃತಪಟ್ಟಿದ್ದಾರೆ.
ದಿಲ್ಲಿ, ಕೇರಳ ಹಾಗೂ ರಾಜಸ್ಥಾನದಂತಹ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಂದಿ ಜ್ವರದ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಹೇಳಿದೆ.
ಕಳೆದ ವರ್ಷ ಹರಡಿದ ಎಚ್1ಎನ್1 ವಂಶಕ್ಕಿಂತ ಈ ವರ್ಷ ಹರಡಿದ ಎಚ್1ಎನ್1 ವಂಶ ಭಿನ್ನವಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಡಾ. ಎ.ಸಿ. ಧರಿವಾಲ್ ತಿಳಿಸಿದ್ದಾರೆ.
ಈ ವರ್ಷ ಹರಡಿದ ವೈರಸ್ ಮಿಚಿಗನ್ ವಂಶಕ್ಕೆ ಸೇರಿದ್ದು. ಈ ಹಿಂದೆ ಹರಡಿದ ವೈರಸ್ ಕ್ಯಾಲಿಫೋರ್ನಿಯಾ ವಂಶಕ್ಕೆ ಸೇರಿದ್ದು ಎಂದು ಧರಿವಾಲ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸೇವೆಯ ಪ್ರಧಾನ ನಿರ್ದೇಶಕ ಜಗದೀಶ್ ಪ್ರಸಾದ್ ಹೇಳಿದ್ದಾರೆ.







