ದಂಪತಿಗೆ ಜೀವ ಬೆದರಿಕೆ: ಆರೋಪ
ಬೆಂಗಳೂರು, ಆ.24: ನಗರ ವ್ಯಾಪ್ತಿಯಲ್ಲಿರುವ ನಿವೇಶನವನ್ನು ಮಾರಾಟ ಮಾಡಿ, ಪುನಃ ವಾಪಸ್ ನೀಡುವಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರು ದಂಪತಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಗುರುವಾರ ನಗರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಂಪತಿಗಳಾದ ಶಾಹಿನ್ ತಾಜ್ ಮತ್ತು ಎನ್.ನಝೀರ್, ಯಶವಂತಪುರ ವ್ಯಾಪ್ತಿಯ ಮತ್ತಿಕೆರೆ ಬೃಂದಾವನ ನಗರದಲ್ಲಿ ಸರ್ವೇ ಸಂಖ್ಯೆ 30ರಲ್ಲಿ 600 ಅಡಿ ಅಳತೆಯ ಖಾಲಿ ನಿವೇಶನವನ್ನು ಹೊಂದಿದ್ದೇವೆ. ಆದರೆ, ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಹಾಗೂ ವಾಪಸ್ ನೀಡುವಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಾದ ವಿಜಯ್‌ಕುಮಾರ್, ಮುನವ್ವರ್ ಶರೀಫ್ ಎಂಬುವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಇದೇ ನಿವೇಶನವನ್ನು ವಿಜಯಕುಮಾರ್, ಮುನವ್ವರ್ ಶರೀಫ್ ಮಾರಾಟಕ್ಕಿಟ್ಟು, ನಮ್ಮಿಂದ 7 ಲಕ್ಷ ರೂ. ನಗದು ಪಡೆದುಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಹರಿ ಚರಣ್ ಹಾಗೂ ಅವರ ಪತ್ನಿ ಸರೋಜ ಎಂಬುವವರ ಕಡೆಯಿಂದ ನಮಗೆ ಜಿಪಿಎ ಮತ್ತು ಅಫಿಡಟ್ ಮಾಡಿಸಿಕೊಟ್ಟು ನಿವೇಶನ ನಮ್ಮ ಸ್ವಾಧೀನಕ್ಕೆ ಕೊಟ್ಟಿದ್ದರು ಎಂದು ಅವರು ಹೇಳಿದರು.
ಆದರೆ, ಇತ್ತೀಚಿಗೆ ವಿಜಯ್‌ಕುಮಾರ್, ಮುನವ್ವರ್ ಶರೀಫ್ ಈ ನಿವೇಶನ ಯಾರಿಗೋ ಮಾರಾಟ ಮಾಡಿರುವುದಲ್ಲದೆ, ನಿವೇಶನದೊಳಗೆ ಅನಧಿಕೃತವಾಗಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆದುಕೊಂಡು ಆದೇಶ ನಮ್ಮ ಪರವಾಗಿಯೇ ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಈ ಇಬ್ಬರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.
ಜೀವ ಬೆದರಿಕೆ ಹಾಕುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಗೃಹ ಇಲಾಖೆ ಮೊಕದ್ದಮೆ ದಾಖಲಿಸಿ, ಸೂಕ್ತ ತನಿಖೆ ನಡೆಸುವ ಜೊತೆಗೆ ನಮಗೆ ರಕ್ಷಣೆ ನೀಡುವಂತೆ ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇಕ ಜಯಣ್ಣ ಸೇರಿ ಪ್ರಮುಖರಿದ್ದರು.
‘ಮೊಕದ್ದಮೆ ದಾಖಲು ಮಾಡಿಲ್ಲ’
ರಿಯಲ್ ಎಸ್ಟೇಟ್ ಉದ್ಯಮಿಗಳಾದ ವಿಜಯಕುಮಾರ್, ಮುನವ್ವರ್ ಶರೀಫ್ ಸೇರಿ ಪ್ರಮುಖರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ನಮಗೆ ರಕ್ಷಣೆ ನೀಡಿ ಎಂದು ಯಶವಂತಪುರ ಪೊಲೀಸ್ ಠಾಣಾಧಿಕಾರಿ ಮುದ್ದುರಾಜ ಅವರಿಗೆ ಮನವಿ ಮಾಡಿದ್ದರೂ, ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ಜಯಣ್ಣ ಆರೋಪಿಸಿದರು.







