ಹೈಕೋರ್ಟ್‌ನಲ್ಲಿ 35 ನ್ಯಾಯಮೂರ್ತಿಗಳ ಕೊರತೆ

ಬೆಂಗಳೂರು, ಆ.24: ಮಹತ್ವದ ತೀರ್ಪುಗಳನ್ನು ನೀಡುವ ಮೂಲಕವೇ ದೇಶದಲ್ಲಿ ಹೆಸರುವಾಸಿಯಾಗಿದ್ದ ಕರ್ನಾಟಕ ಹೈಕೋರ್ಟ್‌ನಲ್ಲೀಗ ವ್ಯಾಜ್ಯಗಳ ಇತ್ಯರ್ಥ ಹಾಗೂ ವಿಭಾಗೀಯ ಪೀಠಗಳ ರಚನೆಗೆ ಪ್ರಯಾಸ ಪಡಬೇಕಾದ ಸ್ಥಿತಿ ಎದುರಾಗಿದೆ.
ಹೈಕೋರ್ಟ್‌ನಲ್ಲಿ 35 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇರುವುದು ಈ ಸ್ಥಿತಿಗೆ ಕಾರಣವಾಗಿದೆ. 133 ವರ್ಷಗಳ ಸುದೀರ್ಘ ಇತಿಹಾಸವಿರುವ ಹೈಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ಕೊರತೆ ಕಾಡುತ್ತಿದೆ. ಮಂಜೂರಾಗಿರುವ 62 ಹುದ್ದೆಗಳ ಪೈಕಿ ಹಾಲಿ 27 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ 17, ಧಾರವಾಡದಲ್ಲಿ 7 ಮತ್ತು ಕಲಬುರಗಿ ಪೀಠಗಳಲ್ಲಿ 3 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿಜೆ ಕೂಡ ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಲಿದ್ದು, ಕಳೆದ ಜನವರಿಯಿಂದ ಇಲ್ಲಿಯವರೆಗೆ ನಾಲ್ವರು ನ್ಯಾಯಮೂರ್ತಿಗಳು ನಿವೃತ್ತಿಯಾಗಿದ್ದಾರೆ. 2018ರಲ್ಲಿ ಐವರು ನಿವೃತ್ತರಾಗುತ್ತಾರೆ. ಈ ರೀತಿ ಸಾಲು ಸಾಲಾಗಿ ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿರುವುದರಿಂದ ವಿಭಾಗೀಯ ಪೀಠಗಳನ್ನು ರಚಿಸುವುದು ಹೇಗೆ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ನ್ಯಾಯಮೂರ್ತಿಗಳನ್ನು ರೊಟೇಷನ್ ಆಧಾರದ ಮೇಲೆ ನಿಯೋಜಿಸುವುದು ಹೇಗೆ ಎಂಬ ಕಳವಳ ಮತ್ತು ಆತಂಕವನ್ನು ಆ.23ರಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರ ಬೀಳ್ಕೊಡುಗೆ ಸ ಮಾರಂಭದಲ್ಲಿ ವ್ಯಕ್ತಪಡಿಸಿದ್ದರು.
ಜಿಲ್ಲಾ ನ್ಯಾಯಾಧೀಶರ ಸ್ಥಾನದಿಂದ ನ್ಯಾಯಮೂರ್ತಿಗಳಿಗೆ ಭಡ್ತಿ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಆದರೆ, ವಕೀಲರ ವೃಂದದ ನೇಮಕ ಎನ್‌ಜೆಎಸಿ ಸೇರಿ ಒಂದಲ್ಲಾ ಒಂದು ಕಾರಣದಿಂದಾಗಿ ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2015ರ ಜನವರಿಯಲ್ಲಿ ವಕೀಲರ ವೃಂದದಿಂದ ನಾಲ್ವರು ನ್ಯಾಯಮೂರ್ತಿಗಳಾಗಿದ್ದರು. ಅಲ್ಲಿಂದೀಚೆಗೆ ಕರ್ನಾಟಕ ಹೈಕೋರ್ಟ್‌ನ ಕೊಲಿಜಿಯಂ ಆಗಿಂದಾಗ್ಗೆ ಸಭೆ ಸೇರಿ ಕೆಲವು ಪ್ರತಿಭಾವಂತ ವಕೀಲರೂ ಸೇರಿ ಸುಮಾರು 18ಕ್ಕೂ ಹೆಚ್ಚು ಮಂದಿಯ ಮೂರು-ನಾಲ್ಕು ಪಟ್ಟಿಗಳನ್ನು ಕಳುಹಿಸಿದ್ದರೂ ಸಹ ಒಂದೇ ಒಂದು ನೇಮಕವೂ ನಡೆದಿಲ್ಲ. ವಕೀಲರ ವಲಯದಲ್ಲಿ ನಿರಾಶೆ ಮೂಡಿದೆ. ವಯಸ್ಸು ಮೀರುತ್ತಿರುವುದರಿಂದ ಅರ್ಹತೆ ಇರುವವರಿಗೂ ಅವಕಾಶ ಸಿಗದಂತಾಗಿದೆ.
ಹೈಕೋರ್ಟ್‌ನಲ್ಲಿ ಶೇ.60ರಷ್ಟು ನ್ಯಾಯಮೂರ್ತಿಗಳ ಕೊರತೆ ಇರುವುದರಿಂದ ಹಾಲಿ ನ್ಯಾಯಮೂರ್ತಿಗಳಿಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ, ಶೀಘ್ರ ನ್ಯಾಯದಾನ ಕೂಡ ಮರೀಚಿಕೆಯಾಗುತ್ತಿದೆ.
ಮೊದಲು ಅಧೀನ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿ ಬೆಳಗ್ಗೆ ಮೇಲ್ಮನವಿ ಸಲ್ಲಿಸಿದರೆ, ಸಂಜೆ ವಿಚಾರಣೆಗೆ ಬರುತ್ತಿತ್ತು. ಆದರೀಗ ವಾರ, ತಿಂಗಳಾದರೂ ಕೋರ್ಟ್ ಮುಂದೆ ಬರುವುದಿಲ್ಲ ಎನ್ನುತ್ತಾ ರೆ ಹೈಕೋರ್ಟ್ ವಕೀಲ ಅಮೃತೇಶ್.
‘ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವುದರಿಂದ ಕಕ್ಷಿದಾರರಿಗೆ ತೊಂದರೆ ಆಗುತ್ತಿದೆ. ಇದರಿಂದ, ಸಾಮಾನ್ಯ ಜನತೆಗೆ ಅನ್ಯಾಯವಾಗುತ್ತಿದೆ. ಆದರೆ, ರಾಜಕೀಯ ಮುಖಂಡರ ಪ್ರಕರಣಗಳನ್ನು ಮಾತ್ರ ತುರ್ತಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ, ಈ ಅನ್ಯಾಯವನ್ನು ಸರಿಪಡಿಸಲು ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು.’
-ಜಿ.ಆರ್.ಮೋಹನ್, ಹೈಕೋರ್ಟ್ ವಕೀಲ







