ಅಫ್ಘಾನ್‌ನಲ್ಲಿ ಪಾಕ್ ಪಾತ್ರವನ್ನು ಅಮೆರಿಕ ಗೌರವಿಸಬೇಕು: ಚೀನಾ

ಬೀಜಿಂಗ್, ಆ. 24: ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಹಿಸಿರುವ ಪಾತ್ರವನ್ನು ಅಮೆರಿಕ ಗೌರವಿಸಬೇಕು ಹಾಗೂ ಅದರ ಭದ್ರತಾ ಕಳವಳಗಳನ್ನು ಪರಿಗಣಿಸಬೇಕು ಎಂದು ಚೀನಾ ರಾಜತಾಂತ್ರಿಕ ಯಾಂಗ್ ಜಿರೇಚಿ ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್‌ಗೆ ಹೇಳಿದ್ದಾರೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ತನ್ನ ನೆಲದಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ಹೊಂದಿರುವ ಭಯೋತ್ಪಾದಕ ಗುಂಪುಗಳ ಬಗ್ಗೆ ಪಾಕಿಸ್ತಾನ ಇನ್ನು ವೌನವಾಗಿರಲು ಸಾಧ್ಯವಿಲ್ಲ ಎಂಬುದಾಗಿ ಅಮೆರಿಕದ ಅಧ್ಯಕ್ಷ ಈ ವಾರದ ಆದಿ ಭಾಗದಲ್ಲಿ ಹೇಳಿದ್ದರು. ಬಳಿಕ ಅದಕ್ಕೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶ ಸಚಿವಾಲಯವು ತನ್ನ ಮಿತ್ರದೇಶ ಪಾಕಿಸ್ತಾನವನ್ನು ಸಮರ್ಥಿಸಿತ್ತು.
ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕದೊಂದಿಗೆ ಕೈಜೋಡಿಸಲು ಹಾಗೂ ಆ ದೇಶ ಮತ್ತು ವಲಯದಲ್ಲಿ ಸ್ಥಿರತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲು ಚೀನಾ ಸಿದ್ಧವಿದೆ ಎಂಬುದಾಗಿ ಯಾಂಗ್ ಹೇಳಿದರು.
‘‘ಅಫ್ಘಾನಿಸ್ತಾನ ವಿಷಯದಲ್ಲಿ ಪಾಕಿಸ್ತನ ವಹಿಸಿರುವ ಮಹತ್ವದ ಪಾತ್ರವನ್ನು ನಾವು ಗೌರವಿಸಬೇಕು ಹಾಗೂ ಪಾಕಿಸ್ತಾನದ ಸಾರ್ವಭೌಮತೆ ಮತ್ತು ಭದ್ರತಾ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳಬೇಕು’’ ಎಂದು ಫೋನ್ ಸಂಭಾಷಣೆಯಲ್ಲಿ ಯಾಂಗ್, ಟಿಲರ್‌ಸನ್‌ಗೆ ಹೇಳಿದರು ಎಂದು ಚೀನಾ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.







