ಗೋರಖ್‌ಪುರ ಮಕ್ಕಳ ಸಾವು: 9 ಮಂದಿ ವಿರುದ್ಧ ಎಫ್‌ಐಆರ್ ದಾಖಲು
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರ್ಗಾವಣೆ

ಲಕ್ನೋ, ಆ. 24: ಆಮ್ಲಜನಕದ ಕೊರತೆಯಿಂದ 90ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸೇರಿದಂತೆ 9 ಮಂದಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ದ್ರವೀಕೃತ ಆಮ್ಲಜನಕ ಪೂರೈಸುವ ಜವಾಬ್ದಾರಿ ಹೊತ್ತಿದ್ದ ಕಂಪೆನಿ ಮೆಸರ್ಸ್ ಪುಷ್ಪಾ ಸೇಲ್ಸ್‌ನ ಮಾಲಕರ ಹೆಸರನ್ನು ಕೂಡ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.
ಇದಲ್ಲದೆ ದುರಂತಕ್ಕೆ ಸಂಬಂಧಿಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಶಿಕ್ಷಣ) ಅನಿತಾ ಭಟ್ನಗರ್ ಜೈನ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ಪ್ರಕರಣದ ಕುರಿತಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿ ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಸಿದೆ.
ಮಾಜಿ ಪ್ರಾಂಶುಪಾಲ ಡಾ. ರಾಜೇಶ್ ಮಿಶ್ರಾ, ಅವರ ಪತ್ನಿ ಡಾ. ಪೂರ್ಣಿಮಾ ಶುಕ್ಲಾ, ಡಾ. ಖಫೀಲ್ ಖಾನ್, ಪುಷ್ಪಾ ಸೇಲ್ಸ್‌ನ ಮಾಲಕ ಸೇರಿದಂತೆ 9 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪ್ರಧಾನ ನಿರ್ದೇಶಕ (ಲಕ್ನೋ ವಲಯ) ಅಭಯ್ ಪ್ರಸಾದ್ ಹೇಳಿದ್ದಾರೆ.
ಭ್ರಷ್ಚಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಕಾನೂನುಗಳ ಅಡಿ ಹಾಗೂ ನರಹತ್ಯೆ ಹಾಗೂ ಕ್ರಿಮಿನಲ್ ಸಂಚಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿಯಲ್ಲಿ ವೈದ್ಯಕೀಯ ಶಿಕ್ಷಣದ ಪ್ರಧಾನ ನಿರ್ದೇಶಕ ಕೆ.ಕೆ. ಗುಪ್ತಾ ಇಲ್ಲಿನ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.ಈ ಪ್ರಕರಣವನ್ನು ಗೋರಖ್‌ಪುರಕ್ಕೆ ವರ್ಗಾಯಿಸಲಾಗಿದೆ.







