ಪಂಚ ಪೀಠಾಧೀಶರ ನಿರ್ಣಯ ಹಾಸ್ಯಾಸ್ಪದ: ಮಾತೆ ಮಹಾದೇವಿ

ಬಾಗಲಕೋಟೆ, ಆ.24: ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಂಭಾಪುರಿ ಶ್ರೀಗಳು ಮತ್ತು ಮತ್ತಿತರರು ತೆಗೆದುಕೊಂಡಿರುವ ನಿರ್ಣಯ ಹಾಸ್ಯಾಸ್ಪದ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದ್ದಾರೆ.
ಗುರುವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನ ವಿದ್ಯಾ ಭೂಮಿ, ಐಕ್ಯ ಸ್ಥಳವಾದ ಕೂಡಲಸಂಗಮಕ್ಕೆ ನನಗೆ ಬರಲು ಅವಕಾಶ ಕೊಡ ಕೊಡದು ಎಂದು ಪಂಚ ಪೀಠಾಧೀಶರು ಹಾಸ್ಯಾಸ್ಪದ ನಿರ್ಣಯ ಕೈಗೊಂಡಿರುವುದು ತಿಳಿದು ಬಂದಿದೆ.
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಇರಬಹುದು. ಬರಬಹುದು ಬೇಡ ಎನ್ನಲು ಇವರಿಗೆ ಯಾವ ಅಧಿಕಾರವಿದೆ. ಇಂಥ ನಿರ್ಣಯವು ಅವರ ಮೂರ್ಖತನಕ್ಕೆ ಸಾಕ್ಷಿಯಾಗುತ್ತದೆ. ಕೂಡಲಸಂಗಮದಲ್ಲಿ ಬಹುದೊಡ್ಡ ಮಠವನ್ನು ಕಟ್ಟಿ ನಾವು ಇಲ್ಲಿಯೇ ನೆಲೆಸಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಅಂದಾಗ ನಮ್ಮನ್ನು ಬರದಂತೆ ನಿರ್ಬಂಧಿಸುವ ಅಧಿಕಾರ ಇವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ರಂಭಾಪುರಿ ಪೀಠ ಶರಣ ಸಂಸ್ಕೃತಿಯದ್ದು, ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಉಳವಿಯಲ್ಲಿ ಲಿಂಗೈಕ್ಯರಾದ ಮೇಲೆ ವೀರಮಾತೆ ಅಕ್ಕನಾಗಲಾಂಬಿಕೆಯವರು ರುದ್ರಮುನಿ ದೇವರೊಡನೆ ಸಂಚಾರ ಮಾಡುತ್ತಾ ಮಲೆನಾಡಿನಲ್ಲಿ ಒಂದು ಧರ್ಮಪೀಠ ಇರಬೇಕೆಂದು ಬಾಳೇಹೊನ್ನೂರಿನಲ್ಲಿ ಪೀಠ ಸ್ಥಾಪಿಸಿ, ರೇವಣಸಿದ್ದೇಶ್ವರರ ಮಗ ರುದ್ರಮುನಿದೇವರನ್ನು ಪೀಠಾಧಿಕಾರಿಯನ್ನಾಗಿ ಮಾಡಿದರು. ಈ ಬಗ್ಗೆ ತ.ಸು.ಶಾಮರಾಯರು ಸಂಗ್ರಹಿಸಿದ ಶಿವಶರಣರ ಕಥಾರತ್ನ ಕೋಶದಲ್ಲಿ ದಾಖಲೆಯಾಗಿದೆ.
ಇಂಥ ಶರಣ ಸಂಸ್ಕೃತಿಯ ಪೀಠದ ಅಧಿಕಾರಿಯಾಗಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರಂಭಾಪುರಿ ಶ್ರೀಗಳ ವರ್ತನೆ ಖಂಡನೀಯ. ಶರಣ ಪರಂಪರೆಯ ಈ ಪೀಠದಲ್ಲಿ ಕುಳಿತಿರಲು ಶ್ರೀಗಳಿಗೆ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.







