ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಯ ವಿಧಿ ವಿಜ್ಞಾನ ವರದಿ ಆಘಾತ ಉಂಟು ಮಾಡಿದೆ: ಸಿ.ಟಿ.ರವಿ

ಚಿಕ್ಕಮಗಳೂರು, ಆ.24: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯ ನಾಶ ಮಾಡಲಾಗಿದೆಯೆಂಬ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಘಾತ ಉಂಟುಮಾಡಿದೆ ಎಂದು ಶಾಸಕ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯ ಮುಚ್ಚಿ ಹಾಕಲು ರಾಜ್ಯ ಸರ್ಕಾರ ಸಿಐಡಿಯನ್ನು ಯಾವ ರೀತಿ ಬಳಸಿಕೊಂಡಿದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ನೇರ ಹೊಣೆ. ಸಾಕ್ಷಿ ನಾಶ ಮಾಡಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ತಿಳಿಸಿದ್ದು, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಎನ್ನುವ ಅನುಮಾನ ಜನತೆಯಲ್ಲಿ ಮೂಡುತ್ತಿದೆ. ಮೊಬೈಲ್ ಕಾಲ್ ಡೀಟೈಲ್, ಎಸ್‍ಎಂಎಸ್, ಆಡಿಯೋ-ವೀಡಿಯೊ ಮೆಸೇಜ್‍ಗಳನ್ನು ಅಳಿಸಲಾಗಿದೆ. ಎಕ್ಸ್ ಲ್ ಶೀಟ್ ಸೇರಿ ದಂತೆ ಕಂಪ್ಯೂಟರ್‍ನ ವಿವಿಧ ದಾಖಲೆ ನಾಶ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ ಎಂದರು.
ಈ ಎಲ್ಲ ಅಂಶಗಳನ್ನು ಅವಲೋಕಿಸಿದರೆ ಸರ್ಕಾರ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು ಸಿಐಡಿ ಬಳಸಿಕೊಂಡಿದೆ ಎಂಬುದು ಸಾಬೀತಾಗುತ್ತದೆ. ಕಾಂಗ್ರೆಸ್ ಎಟಿಎಂ ಎಂದೇ ಬಿಂಬಿತವಾಗಿರುವ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಡಿವೈಎಸ್‍ಪಿ ಗಣಪತಿ ಸಾಯುವ ಮುನ್ನ ಹೇಳಿಕೆ ನೀಡಿದ್ದರು. ಪ್ರಕರಣ ದಾಖಲಿಸಿದ ಕೇವಲ 3 ತಿಂಗಳಲ್ಲಿ ಅವರ ವಿರುದ್ಧ ಸಿಐಡಿಯಿಂದ ಬಿ ರಿಪೋರ್ಟ್ ಹಾಕಿಸಲಾಯಿತು. ಅಂದೇ ಬಿಜೆಪಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಪ್ರತಿಭಟಿಸಿತ್ತು ಎಂದು ತಿಳಿಸಿದರು.
ಪ್ರತಿಭಟನೆಗೆ ಬಗ್ಗದ ರಾಜ್ಯ ಸರ್ಕಾರ ಪ್ರಭಾವಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಕೂಡಲೇ ಪ್ರಕರಣದ ತನಿಖಾಧಿಕಾರಿ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ನಾನು ರಾಜಕಾರಣದಲ್ಲಿ ಇರುವಷ್ಟು ದಿನ ಅಭಿವೃದ್ಧಿಪರ ರಾಜಕಾರಣ ಮಾಡುತ್ತೇನೆ. ನಾನು ಜನರ ನಡುವೆ ಇರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಜನರ ಮಧ್ಯೆ ಬೆರೆಯಲು ಗ್ರಾಮ ವಾಸ್ತವ್ಯವನ್ನು ಒಂದು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದ್ದೇನೆ. ನನ್ನ ಗ್ರಾಮ ವಾಸ್ತವ್ಯವನ್ನು ಟೀಕಿಸುತ್ತಿರುವ ಜನರಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡುತ್ತಾರೆ. ಕೆಲವರು ಜಾತಿ ಮೂಲಕ ರಾಜಕಾರಣ ಮಾಡುತ್ತಾರೆ. ಇನ್ನೂ ಕೆಲವರು ದೌರ್ಜನ್ಯ ನಡೆಸಿ ರಾಜಕಾರಣ ಮಾಡುತ್ತಾರೆ. ನಾನು ಅಭಿವೃದ್ಧಿಯೊಂದಿಗೆ ಪ್ರೀತಿ ರಾಜಕಾರಣ ಮಾಡುತ್ತಿದ್ದೇನೆ. ಟೀಕೆ ಮಾಡುವವರು ಎಲ್ಲ ಕಾಲದಲ್ಲಿ ಇರುತ್ತಾರೆ ಎಂದರು.
ಮಂಡಳಿ ರಚನೆಯೇ ತಪ್ಪು: ಡಿ-ನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ನಡೆಸದೆ ಸಿಬಿಐಗೆ ವಹಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಮುಖ್ಯಮಂತ್ರಿ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದಲ್ಲಿ ತನಿಖಾ ಆಯೋಗ ನೇಮಿಸಿದರು. ಅದು ಸಿಎಂಗೆ ಕ್ಲೀನ್‍ಚಿಟ್ ನೀಡಿದೆ. ಅಕ್ರಮವಾಗಿ ಡಿ ನೋಟಿಫಿಕೇಶನ್ ಮಾಡಿರುವ ಸತ್ಯ ಇಡೀ ರಾಜ್ಯದ ಜನತೆಗೆ ತಿಳಿದಿದೆ. ರಾಜ್ಯ ಸರ್ಕಾರವೇ ನೇಮಿಸಿದ್ದ ತನಿಖಾ ಮಂಡಳಿಯಿಂದ ಕ್ಲೀನ್‍ಚಿಟ್ ಬಿಟ್ಟು ಬೇರೇನೂ ನಿರೀಕ್ಷಿಸಲು ಸಾಧ್ಯವಿರಲಿಲ್ಲ.
:- ಸಿ.ಟಿ.ರವಿ, ಶಾಸಕರು.







