ಸಂಘಟನೆಗಳನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಬಾರದು: ಅನಿತಾ ಬಾಯಿ ಮಾಲತೇಶ್

ದಾವಣಗೆರೆ, ಆ.24: ಸಂಘಟನೆಗಳನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳದೇ ಜನಪರ ಕಾರ್ಯಕ್ಕೆ ಬಳಕೆ ಮಾಡಿದಾಗ ಮಾತ್ರ ಸಂಘಟನೆಗಳಿಗೆ ಮಹತ್ವ ಬರಲು ಸಾಧ್ಯ ಎಂದು ಮೇಯರ್ ಅನಿತಾ ಬಾಯಿ ಮಾಲತೇಶ್ ಹೇಳಿದರು.
ನಗರದ ಬೂದಾಳ್ ರಸ್ತೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ ಜಿಲ್ಲಾ ಘಟಕ, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಹಾಗೂ ನಗರ ಬಡವರ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಜ್ಯಮಟ್ಟದ ಎಲ್ಲಾ ಪ್ರಗತಿಪರ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಉದ್ಘಾಟನೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ತಿಳಿಯಬೇಕಾದರೆ ಸಂಘಟನೆಗಳ ಹೋರಾಟ ಅತ್ಯವಶ್ಯಕ. ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಸಂಘಟನೆಗಳ ಹೋರಾಟದ ಮೂಲಕ ಜನಪ್ರತಿನಿಧಿಗಳು ಸ್ಪಂದಿಸಲು ಸಹಕಾರಿಯಾಗುತ್ತದೆ. ಸಂಘಟನೆಗಳಿಂದ ರೈತರ ಸಾಲಮನ್ನಾ ಮಾಡುವುದಕ್ಕೆ ಸಾಧ್ಯವಾಗುತ್ತದೆ ಸಂಘಟನೆಗಳನ್ನು ವೈಯುಕ್ತಿಕವಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದರು.
ಸಮಾಜದ ಜನಪರ ಕೆಲಸಗಳ ಮಾಡುವುದರ ಮೂಲಕ ಸಂಘಟನೆಗಳು ಗುರುತಿಸಿಕೊಳ್ಳಬೇಕಾಗಿದೆ. ಸಚಿವರು ಮತ್ತು ಶಾಸಕರು ನಗರದಲ್ಲಿ ಅಭಿವೃದ್ಧಿಯ ಕೆಲಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಹಾಲಿ ಶಾಸಕರು ಮತ್ತು ಸಚಿವರನ್ನು ಮತ್ತೆ ಗೆಲ್ಲಿಸಬೇಕು. ಆಗ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೆಕೆಎನ್‍ಎಸ್ ರಾಜ್ಯ ಸಂಚಾಲಕ ಎಚ್.ಟಿ. ರಾಮೇಗೌಡ್ರು, ಎನ್.ಪಿ. ಸ್ವಾಮಿ, ಜೆ. ಅಮಾನುಲ್ಲಾ ಖಾನ್, ಶಂಕರ್ ಘಟ್ಟಿ ಸಂಗಾವಿ, ಕೆ. ಮಂಜುನಾಥ್, ಟಿ. ರೇವಣ್ಣ, ಎನ್. ಪ್ರಕಾಶ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು.







