'ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ಸಿಕ್ಕದಿರುವುದು ಬೇಸರ'

ದಾವಣಗೆರೆ, ಆ.24: ಡಿಸೆಂಬರ್ ನಲ್ಲಿ ಸ್ವತಂತ್ರ ಲಿಂಗಾಯಿತ ಧರ್ಮ ಮಾಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ ಕಾಯಕ ದಾಸೋಹ ಮಂಟಪ, ಸೋಮೇಶ್ವರ ದೇವಸ್ಥಾನ ಟ್ರಸ್ಟ್‍ನಿಂದ ಹಮ್ಮಿಕೊಂಡಿದ್ದ ಚಿಂದೋಡಿ ಲೀಲಾರವರ ಸ್ಮರಣೋತ್ಸವ ಹಾಗೂ ಕೂಡಲ ಸಂಗಮದೆಡೆಗೆ ಪ್ರವಚ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಬೃಹತ್ ಹೋರಾಟದಲ್ಲಿ 25 ಲಕ್ಷಕ್ಕೂ ಹೆಚ್ಚು ಲಿಂಗಾಯತರು ಸೇರಿಲಿದ್ದು, ಶೀಘ್ರ ಸಮಾಜದ ಮುಖಂಡರು ಚೆರ್ಚಿಸಿ ರ್ಯಾಲಿಗೆ ದಿನ ನಿಗದಿಪಡಿಸಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎರಡು ಸಮುದಾಯಗಳ ಹಿತ ಕಾಯಲು ಲಿಂಗಾಯತ, ವೀರಶೈವ ಎರಡು ಒಂದೇ ಎನ್ನುತ್ತಿದ್ದಾರೆ. ಇದು ಸರಿ ಅಲ್ಲ ಎಂದ ಅವರು, ಧರ್ಮದ ವಿಚಾರವಾಗಿ ಸೆ. 3ರಂದು ಮಹಾರಾಷ್ಟ್ರದಲ್ಲಿ ರ್ಯಾಲಿ ನಡೆಸಲಾಗುವುದು. ಗೋವಾ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳಿಂದ 5 ಲಕ್ಷ ಜನ ಸೇರಿ ಸರಕಾರಕ್ಕೆ ಮನವಿ ಮಾಡಲಿದ್ದಾರೆ. ಅಲ್ಲದೆ, ಸೆ. 20ರಂದು ಮೈಸೂರು ಮತ್ತು ಸೆ. 22ರಂದು ಮುರುಘಾ ಶರಣರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ರ್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರಕಾರ ಲಿಂಗಾಯತ ಧರ್ಮಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದರೆ, ಯಡಿಯೂರಪ್ಪ ನೇತೃತ್ವದಲ್ಲಿ ಪ್ರಧಾನಿ ಮೋದಿ ಬಳಿ ನಿಯೋಗ ಹೋಗಿ ಸ್ವತಂತ್ರ್ಯ ಧರ್ಮಕ್ಕೆ ಒತ್ತಾಯಿಸುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಒಂದು ಧರ್ಮ ಸ್ಥಾಪಿಸಿಕೊಳ್ಳಬೇಕಾಗಿತ್ತು. ಆದರೆ, ಕೆಲವರು ವೀರಶೈವ ಅಂತ ಗೊಂದಲ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.
900 ವರ್ಷಗಳ ಹಿಂದೆಯೇ ಲಿಂಗಾಯತ ಧರ್ಮ ಸ್ಥಾಪಿತವಾಗಿದೆ. ಇದು ಕಾಯಕ ಧರ್ಮವಾಗಿದ್ದು ಸಾಮಾಜಿಕ ನ್ಯಾಯ ಇದೆ. ಈ ಧರ್ಮ ಎಲ್ಲರನ್ನೂ ಅಪ್ಪಿಕೊಳ್ಳತ್ತದೆ. ವಿಶ್ವ ಧರ್ಮವಾಗುವ ಎಲ್ಲ ಅರ್ಹತೆ ಹೊಂದಿದೆ. ಇಂತ ಧರ್ಮಕ್ಕೆ ಇಲ್ಲಿವರೆಗೂ ಸಂವಿಧಾನಾತ್ಮಕ ಮಾನ್ಯತೆ ಸಿಕ್ಕದಿರುವುದು ಬೇಸರ ಮೂಡಿಸಿದೆ ಎಂದರು.
ದಾವಣಗೆರೆಯ ಗಾಜಿನ ಮನೆಗೆ(ಗ್ಲಾಸ್‍ಹೌಸ್) ಪದ್ಮಶ್ರೀ ಚಿಂದೋಡಿ ಲೀಲಾರ ಹೆಸರು ಹಾಗೂ ಬೆಳಗಾವಿ ಗಾಜಿನ ಮನೆಗೆ ರಂಗಕರ್ಮಿ ಏಣಗಿ ಬಾಳಪ್ಪರ ಅವರ ಹೆಸರು ನಾಮಕರಣ ಮಾಡಿ ಎಂದು ಒತ್ತಾಯಿಸಿದ ಅವರು, ಕೆಲ ಭಾಗಗಳಲ್ಲಿ ಯಾವುದೇ ಕಲಾವಿದರು ಮರಣ ಹೊಂದಿದರೆ ಅಂತಹವರ ಹೆಸರನ್ನು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಹೆಸರಿಡುವ ಮೂಲಕ ಗೌರವ ನೀಡಲಾಗುತ್ತದೆ. ಆದರೆ, ಅಂತಹ ಪದ್ಧತಿ ಈ ಭಾಗದಲ್ಲಿ ಆಗುತ್ತಿಲ್ಲ ಎಂದು ವಿಷಾಧಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಜನರಿಗೆ ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಧಾರ್ಮಿಕ, ಆರ್ಥಿಕ ಹಕ್ಕು ಈವರೆಗೂ ದೊರಕಿಲ್ಲ. ಈ ಕಾರಣಕ್ಕೆ ಧರ್ಮದ ಗೊಂದಲ ಸೃಷ್ಟಿಯಾಗಿದೆ. ಶ್ರೀಮಂತರು ಇನ್ನಷ್ಟು ಸ್ಥಿತಿವಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಧಾರಾವಾಡದ ಬಸವ ಮಹಾಮನೆ ಪ್ರವಚನಕರಾದ ಚಂದ್ರಾದೇವಿ, ಕೆಬಿಆರ್ ಡ್ರಾಮಾ ಕಂಪನಿ ಮಾಲಕ ಚಿಂದೋಡಿ ಎಲ್. ಚಂದ್ರಧರ್, ಸಪ್ತಗಿರಿ ವಿದ್ಯಾಸಂಸ್ಥೆ ಸಂಸ್ಥಾಪಕ ರಾಮಮೂರ್ತಿ, ರುದ್ರಮ್ಮ, ಶಿವರಾಜ್, ಸುನೀಲ್ ಮತ್ತಿತರರಿದ್ದರು.







