ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಲು ಜಿಎಸ್‍ಟಿ ಸಹಕಾರಿ: ಪ್ರೊ. ಚನ್ನಪ್ಪ

ಚಿಕ್ಕಬಳ್ಳಾಪುರ, ಆ.24: ಜಿಎಸ್‍ಟಿ ಪದ್ಧತಿ ಜಾರಿಯಿಂದಾಗಿ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವ ಜೊತೆಗೆ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಉಪನ್ಯಾಸಕ ಪ್ರೊ. ಚನ್ನಪ್ಪ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬಿಜಿಎಸ್ ಪದವಿ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಜಿಎಸ್‍ಟಿ ಕುರಿತು ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್‍ಟಿಯಿಂದ ದೇಶದಲ್ಲೆಡೇ ಏಕ ರೂಪದ ತೆರಿಗೆ ಜಾರಿಯಾಗಿದೆ. ಇದರಿಂದ ಗ್ರಾಹಕ, ವ್ಯಾಪಾರಿ, ಸರಕಾರ ನಡುವೆ ಪಾರದರ್ಶಕತೆ ಉಂಟಾಗಿದೆ ಎಂದರು.
ಈ ಹಿಂದೆ ದೇಶದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿ ಮಾರಾಟ ಮಾಡುವ ವಸ್ತುಗಳ ಬೆಲೆಯಲ್ಲಿರುವ ಏರುಪೇರು ಕಾಣಬಹುದಾಗಿತ್ತು. ಆದರೆ ಜಿಎಸ್‍ಟಿ ಜಾರಿಯಿಂದ ದೇಶದೆಲ್ಲೆಡೇ ವಸ್ತುವಿನ ಒಂದೇ ಬೆಲೆಯಲ್ಲಿ ದೊರೆಯಲಿದೆ. ಇದರಿಂದ ಕಪ್ಪುಹಣದ ಕಡಿವಾಣಕ್ಕೂ ಸಹಕಾರಿಯಾಗಿದೆ ಎಂದ ಅವರು, ಗ್ರಾಹಕರು ಖರೀದಿಸುವ ಉತ್ಪನ್ನಗಳಿಗೆ ತಪ್ಪದೇ ಬಿಲ್ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವೆಂಕಟೇಶಬಾಬು, ಡೀನ್ ದೊಡ್ಡೇಗೌಡ, ಎಬಿವಿಪಿ ವಿಭಾಗ ಸಂಚಾಲಕ ಮಂಜುನಾಥರೆಡ್ಡಿ, ಮುಖಂಡರಾದ ವಿಜಯ್‍ಕುಮಾರ್, ಅಖಿಲ್, ಅಮಿತ್‍ರೆಡ್ಡಿ, ದಿವ್ಯಾಜೈನ್, ಕನಕಾ, ಸುಪ್ರಿಯಾ, ದೇವಿಕಾ ಮತ್ತಿತರರು ಭಾಗವಹಿಸಿದ್ದರು.







