ಮಡಿಕೇರಿ: ನಾಲ್ವರು ಗಿರಿಜನ ಮಕ್ಕಳು ನಾಪತ್ತೆ

ಮಡಿಕೇರಿ, ಆ.24: ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ಕಾಣೆಯಾಗಿರುವ ಘಟನೆ ನಡೆದಿದೆ.
ಕಿಬ್ಬೆಟ್ಟ ಗಿರಿಜನ ಹಾಡಿಯ ಮಕ್ಕಳಾದ 5ನೆ ತರಗತಿ ವಿದ್ಯಾರ್ಥಿನಿ ದಿವ್ಯ(9), ಎರಡನೆ ತರಗತಿ ವಿದ್ಯಾರ್ಥಿಗಳಾದ ಸೂರ್ಯ(6), ಲಕ್ಷ್ಮೀ(6) ಮತ್ತು ಆಶಾ(7) ಕಾಣೆಯಾಗಿರುವ ವಿದ್ಯಾರ್ಥಿಗಳು. ಸೋಮವಾರ ಬೆಳಿಗ್ಗೆ 9ಕ್ಕೆ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ತೆರಳಿದ್ದಾರೆ. 10ಗಂಟೆಯ ನಂತರ ಶಾಲಾ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳು ಶಾಲೆಗೆ ಬಾರದಿರುವ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿದ್ಯಾರ್ಥಿಗಳು ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಪೋಷಕರು ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ, ಬುಧವಾರ ಇಲ್ಲಿನ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾದ ವಿದ್ಯಾರ್ಥಿಗಳ ಕುರಿತು ದೂರು ಸಲ್ಲಿಸಿದ್ದಾರೆ. ದಿವ್ಯ ಮತ್ತು ಸೂರ್ಯ, ರವಿ ಮತ್ತು ಜಯಾ ಎಂಬುವವರ ಮಕ್ಕಳಾಗಿದ್ದಾರೆ. ಲಕ್ಷ್ಮೀ ಮತ್ತು ಆಶಾ ನಾಗಿ ಮತ್ತು ನಾಗೇಶ್‍ರವರ ಸಾಕು ಮಕ್ಕಳಾಗಿದ್ದಾರೆ.
ಪೋಷಕರಾದ ರವಿ ದೂರು ನೀಡಿದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಶಿವಣ್ಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







