ಪದಕದ ಭರವಸೆಯಲ್ಲಿ ಶಿವ ಥಾಪ ಹಾಗೂ ವಿಕಾಸ್ ಕೃಷ್ಣನ್

ಹ್ಯಾಂಬರ್ಗ್, ಆ.24: ಹತ್ತೊಂಬತ್ತನೆ ಆವೃತ್ತಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಶುಕ್ರವಾರ ಆರಂಭವಾಗಲಿದ್ದು, ಶಿವ ಥಾಪ ಹಾಗೂ ವಿಕಾಸ್ ಕೃಷ್ಣನ್ ಪದಕ ಜಯಿಸುವ ಗುರಿ ಹಾಕಿಕೊಂಡಿದ್ದಾರೆ.
ಸಾರ್ವಕಾಲಿಕ ಪದಕ ಪಟ್ಟಿಯಲ್ಲಿ ಜಂಟಿ 49ನೆ ಸ್ಥಾನದಲ್ಲಿರುವ ಭಾರತ 2009, 2011 ಹಾಗೂ 2015ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಲಾ ಒಂದು ಕಂಚು ಜಯಿಸಿತ್ತು.
ಪ್ರತಿಷ್ಠಿತ ಟೂರ್ನಿಯಲ್ಲಿ ಶಿವ ಥಾಪ(2015), ವಿಕಾಸ್(2011) ಹಾಗೂ ಪ್ರಸ್ತುತ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತಿತರಾಗಿರುವ ವಿಜೇಂದರ್‌ಸಿಂಗ್(2009) ತಲಾ ಒಂದು ಬಾರಿ ಕಂಚು ಜಯಿಸಿದ್ದಾರೆ.
ಈ ವರ್ಷಾರಂಭದಲ್ಲಿ ತಾಷ್ಕಂಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಮೂಲಕ ಭಾರತದ 8 ಬಾಕ್ಸರ್‌ಗಳು ಈ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ಗೆ ಪ್ರವೇಶ ಪಡೆದಿದ್ದಾರೆ.
‘‘ನಮ್ಮ ತಯಾರಿ ಉತ್ತಮವಾಗಿದೆ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರು 2 ಬೆಳ್ಳಿ ಹಾಗೂ 2 ಕಂಚು ಪದಕ ಜಯಿಸಿ ಅಂಕಪಟ್ಟಿಯಲ್ಲಿ 3ನೆ ಸ್ಥಾನ ಪಡೆದಿದ್ದಾರೆ. ಫ್ರಾನ್ಸ್ ಹಾಗೂ ಝೆಕ್ ರಿಪಬ್ಲಿಕ್‌ಗೆ ತೆರಳಿ ತರಬೇತಿ ಪಡೆದಿದ್ದಾರೆ. ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಆದರೆ ಪದಕ ಗೆಲ್ಲುವ ಬಗ್ಗೆ ಏನೂ ಹೇಳಲಾರೆ’’ಎಂದು ಭಾರತದ ಬಾಕ್ಸಿಂಗ್ ಕೋಚ್ ಸ್ಯಾಂಟಿಯಾಗೊ ಹೇಳಿದ್ದಾರೆ.
‘‘ಒಲಿಂಪಿಕ್ಸ್‌ನ ಬಳಿಕ ವಿಶ್ವ ಚಾಂಪಿಯನ್‌ಶಿಪ್ ನಮಗೆ ಅತ್ಯಂತ ಮುಖ್ಯ ಟೂರ್ನಮೆಂಟ್ ಆಗಿದೆ. ನಾನು ಈ ಪ್ರತಿಷ್ಠಿತ ಟೂರ್ನಿಗೆ ತಯಾರಿ ನಡೆಸುತ್ತಿದ್ದೇನೆ’’ ಎಂದು ಎರಡು ಬಾರಿ ಒಲಿಂಪಿಯನ್ ಹಾಗೂ ಸತತ ಮೂರು ಏಷ್ಯನ್ ಚಾಂಪಿಯನ್‌ಶಿಪ್ ಪದಕ ಜಯಿಸಿರುವ ಶಿವಥಾಪ ಹೇಳಿದ್ದಾರೆ.
ಅಸ್ಸಾಂ ಬಾಕ್ಸರ್ ಥಾಪ 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 56 ಕೆಜಿ ಬಾಟಮ್‌ವೇಟ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ಈ ಬಾರಿ 60 ಕೆಜಿ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಥಾಪ ಇದೇ ವಿಭಾಗದಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
25ರ ಹರೆಯದ ವಿಕಾಸ್ ಕೃಷ್ಣನ್ ಭಾರತಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ. ಮಾಜಿ ಏಷ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ 75 ಕೆಜಿ ಮಿಡ್ಲ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ನ ಬಳಿಕ ಪಟಿಯಾಲದ ನ್ಯಾಶನಲ್ ಕ್ಯಾಂಪ್‌ಗೆ ತೆರಳದೇ ಪುಣೆಯಲ್ಲಿ ಒಬ್ಬರೇ ತರಬೇತಿ ಪಡೆದಿದ್ದಾರೆ.
ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ಹಿರಿಯ ಬಾಕ್ಸರ್ ಮನೋಜ್ ಕುಮಾರ್(69 ಕೆಜಿ)ಹಾಗೂ ಸುಮೀತ್ ಸಾಂಗ್ವಾನ್(91ಕೆಜಿ) ಪದಕದ ಭರವಸೆ ಮೂಡಿಸಿದ್ದಾರೆ.
10 ದಿನಗಳ ಕಾಲ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 85 ದೇಶಗಳ 280 ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.
ಭಾರತದ ಬಾಕ್ಸಿಂಗ್ ತಂಡ:
ಅಮಿತ್ ಫಾಂಗಲ್(49ಕೆಜಿ), ಕವಿಂದರ್ ಬಿಶ್ಟ್(52ಕೆಜಿ), ಗೌರವ್ ಬಿಧುರಿ(56ಕೆಜಿ),ಶಿವ ಥಾಪ(60ಕೆಜಿ), ಮನೋಜ್ ಕುಮಾರ್(69 ಕೆಜಿ), ವಿಕಾಸ್ ಕೃಷ್ಣನ್(75 ಕೆಜಿ), ಸುಮಿತ್ ಸಾಂಗ್ವಾನ್(91 ಕೆಜಿ) ಹಾಗೂ ಸತೀಶ್ ಕುಮಾರ್(+91ಕೆಜಿ).







