ಬಿಪಿನ್ ಕೊಲೆ ಪ್ರಕರಣ: ಮೂವರ ಬಂಧನ

ತಿರೂರ್,ಆ.25: ಫೈಝಲ್ ಕೊಲೆಪ್ರಕರಣದ ಎರಡನೆ ಆರೋಪಿ ಬಿಪಿನ್ ಕೊಲೆ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇವರಲ್ಲಿ ಒಬ್ಬ ಕೊಲೆ ಸಂಚಿನಲ್ಲಿ ಪಾಲ್ಗೊಂಡ ವ್ಯಕ್ತಿ ಎಂದು ತಿಳಿಸಿದ್ದಾರೆ. ಕೃತ್ಯದಲ್ಲಿ ಶಾಮೀಲಾದವರ ಮಾಹಿತಿಗಾಗಿ ಇನ್ನಿಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಬೆಳಗ್ಗೆ ಆಲತ್ತೂರಿನಲ್ಲಿ ಪಂಚನ್‍ಪಡಿ ಕುಂಡು ಬಾಬು ಎಂಬವರ ಪುತ್ರ ಬಿಪಿನ್(24) ಎಂಬಾತನನ್ನು ಕೊಲೆಗೈಯಲಾಗಿತ್ತು. ಗಾಯಗೊಂಡಿದ್ದ ಬಿಪಿನ್ ಬೈಕ್ ಬಿಟ್ಟು ಓಡಿಪಾರಾಗಲು ನೋಡಿದರೂ ದುಷ್ಕರ್ಮಿಗಳು ಕಡಿದು ಕೊಂದು ಹಾಕಿದ್ದರು. ಪ್ರಾಣ ಉಳಿಸಲಿಕ್ಕಾಗಿ ಸಮೀಪದ ಮನೆಗೆ ನುಗ್ಗಲು ಯತ್ನಿಸುವ ವೇಳೆ ಗೇಟಿನ ಮುಂಭಾಗದಲ್ಲಿ ಪುನಃ ದುಷ್ಕರ್ಮಿಗಳು ಇರಿದಿದ್ದಾರೆ. ಮೂರು ಬೈಕ್ ಗಳಳಲ್ಲಿ ಬಂದ ಆರು ಮಂದಿ ಬಿಪಿನ್‍ನನ್ನು ಕಡಿದಿದ್ದಾರೆಂದು ಪೊಲೀಸರು ಹೇಳಿದ್ದಾರೆ. ದುಷ್ಕರ್ಮಿಗಳು ಮುಖವಾಡ ಧರಿಸಿದ್ದರು ಎಂದು ಸ್ಥಳೀಯರು ಸಾಕ್ಷ್ಯ ನುಡಿದಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಮುಖ್ಯಸ್ಥ ದೇಬೇಶ್‍ಕುಮಾರ್ ಬೆಹ್ರರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗಿದೆ. ತೃಶೂರ್ ರೇಂಜ್ ಐಜಿ ಎಂ.ಆರ್. ಅಜಿತ್‍ಕುಮಾರ್ ಸ್ಥಳಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞ ಕೆ. ನಿತೀಶ್ ಬಾಬು ಸ್ಥಳಕ್ಕಾಗಿಮಿಸಿದ್ದರು.





