ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ದೋಷಿ: ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು

ಪಂಚಕುಲ,ಆ.25: ಸ್ವಯಂಘೋಷಿತ ದೇವಮಾನವ ಮತ್ತು ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಹರಿಯಾಣದ ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾದೀಶ ಜಗದೀಪ್ ಸಿಂಗ್ ಇಂದು ಮಧ್ಯಾಹ್ನ 3:00 ಗಂಟೆಗೆ ತೀರ್ಪು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣವನ್ನು ಆ.28ರಂದು ನ್ಯಾಯಾಲಯ ಪ್ರಕಟಿಸಲಿದೆ.
ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬೆನ್ನಲ್ಲೆ ಗುರ್ಮಿತ್ ರಾಮ್ ರಹೀಂ ಸಿಂಗ್ ರನ್ನು ಪೊಲೀಸರು ಹರಿಯಾಣದ ಅಂಬಾಲ ಜೈಲಿಗೆ ಕರೆದೊಯ್ಯಲು ವಶಕ್ಕೆ ತೆಗೆದುಕೊಂಡಿದ್ದಾರೆ.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಮುನ್ನಚ್ಚೆರಿಕೆ ಕ್ರಮವಾಗಿ ಸೇನೆಯನ್ನು ಕರೆಸಲಾಗಿತ್ತು.
2002ರಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆಗಿನ ಪ್ರಧಾನಿ ಅಟಲ್ ವಾಜಪೇಯಿ ಅವರಿಗೆ ಗುರ್ಮಿತ್ ರಾಮ್ ರಹೀಂ ವಿರುದ್ಧ ಸಿರ್ಸಾ ದೇರಾದ ಸಚ್ಚಾ ಸೌಧದಲ್ಲಿ ಸಾಧ್ವಿಗಳ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ ಎಂಬ ಅನಾಮಧೇಯ ದೂರು ಬಂದಿತ್ತು.
ಗುರ್ಮಿತ್ ರಾಮ್ ರಹೀಂ ಸಿಂಗ್ ಇಬ್ಬರು ಮಹಿಳಾ ಅನುಯಾಯಿ(ಸಾದ್ವಿ)ಗಳ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ದೂರು ದಾಖಲಾಗಿತ್ತು.ಜುಲೈ 2006ರಲ್ಲಿ ಸಿಬಿಐ ತನಿಖೆಯ ಸಂದರ್ಭದಲ್ಲಿ ಸಾದ್ವಿಯೊಬ್ಬರು ಈತನ ವಿರುದ್ಧ ಹೇಳಿಕೆ ನೀಡಿದ್ದರು. 18 ಸಾದ್ವಿಗಳನ್ನು ವಿಚಾರಣೆ ನಡೆಸಲಾಗಿತ್ತು.
2007 ಜುಲೈನಲ್ಲಿ ಸಿಬಿಐ ತನಿಖೆ ನಡೆಸಿ ರಾಮ್ ರಹೀಂ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.







