ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಬೆಂಬಲಿಗರ ಹಿಂಸಾಚಾರ: ಮೂವರು ಬಲಿ

ಹೊಸದಿಲ್ಲಿ, ಆ.25: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐನ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬೆನ್ನಲ್ಲೆ ಗುರ್ಮಿತ್ ರಾಮ್ ರಹೀಂ ಸಿಂಗ್ ಅವರ ಅನುಯಾಯಿಗಳು ಅಲ್ಲಲ್ಲಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಉದ್ವಿಗ್ನಗೊಂಡಿದೆ.
ಪಂಚಕುಲದಲ್ಲಿ ಹಿಂಸಾಚಾರಕ್ಕೆ ಮೂವರು ಬಾಬಾ ಅನುಯಾಯಿಗಳು ಬಲಿಯಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಾರು, ಬೈಕ್ ಸೇರಿದಂತೆ ನೂರಕ್ಕೂ ಅಧಿಕ ವಾಹನಗಳು ಜಖಂಗೊಂಡಿದೆ. ಸೇನೆ ಮತ್ತು ಪೊಲೀಸರ ಜೊತೆ ಬಾಬಾ ಅನುಯಾಯಿಗಳು ಸಂರ್ಘರ್ಷಕ್ಕೆ ಇಳಿದಿದ್ದಾರೆ. ಪಂಜಾಬ್ ನ ಎರಡು ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದಾರೆ. ಐಟಿ ಇಲಾಖೆಯ ಕಚೇರಿಗೂ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಪಂಜಾಬ್ ನ 5 ಜಿಲ್ಲೆಗಳಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಪಂಚಕುಲ ವಿಶೇಷ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿರುವ ರಾಮ್ ರಹೀಂ ಸಿಂಗ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಖಾಸಗಿ ವಾಹಿನಿಯ ಓಬಿ ವಾಹನಕ್ಕೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಇಳಿದಿರುವ ಬಾಬಾ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ದೇವಮಾನವನ ಬೆಂಬಲಿಗರನ್ನು ನ್ಯಾಯಾಲಯದ ಆವರಣದಿಂದ ತೆರವುಗೊಳಿಸುತ್ತಿದ್ದಾರೆ.
ಶಿಮ್ಲಾ ಹೆದ್ದಾರಿಯಲ್ಲಿ ಎರಡು ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಡೇರಾ ಸಚ್ಚಾ ಸೌಧ ಆಶ್ರಮದ ಬಳಿ ಗುರ್ಮಿತ್ ರಾಮ್ ರಹೀಂ ಸಿಂಗ್ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬೆನ್ನಲ್ಲೆ ಗುರ್ಮಿತ್ ರಾಮ್ ರಹೀಂ ಸಿಂಗ್ ನನ್ನು ಪೊಲೀಸರು ಜೈಲಿಗೆ ಕರೆದೊಯ್ಯಲು ವಶಕ್ಕೆ ತೆಗೆದುಕೊಂಡಿದ್ದಾರೆ







