80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ: ಆರೋಪಿಗಳ ಬಂಧನ

ಬೆಂಗಳೂರು, ಆ.25: ಲಿಂಗರಾಜಪುರಂನಲ್ಲಿರುವ ಮನೆಯೊಂದರಲ್ಲಿ ಚಿನ್ನ, ಬೆಳ್ಳಿ ಆಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುವು ಮಾಡಿ ಪರಾರಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 85 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಸುರಕ್ಷತೆಗಾಗಿ ನೇಮಿಸಿದ್ದ ಭದ್ರತಾಸಿಬ್ಬಂದಿ ಆ.13ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಿಟಕಿಯ ಗ್ರಿಲ್ ಮುರಿದು ಮನೆಯೊಳಗೆ ಪ್ರವೇಶಿಸಿ, ಕಬೋರ್ಡ್‌ಗಳು ಮತ್ತು ಕಬ್ಬಿಣದ ಅಲ್ಮೆರಾಗಳ ಲಾಕ್‌ಗಳನ್ನು ಕಿತ್ತು ಅದರೊಳಗೆ ಇಟ್ಟಿದ್ದಂತಹ ಚಿನ್ನ ಹಾಗೂ ಬೆಳ್ಳಿಯ ಒಡವೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುವು ಮಾಡಿರುವುದಾಗಿ ಮನೆಯ ಮಾಲಕ ಬಾಣಸವಾಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ ಪೊಲೀಸರು, ಖಚಿತ ಮಾಹಿತಿಯನ್ನು ಕಲೆಹಾಕಿ ಆ.16ರಂದು ಪ್ರಕರಣದ ಆರೋಪಿ ನೇಪಾಳ ಮೂಲದ ಹಾರ್ಕಶಾಹ್ಸ್ ಯಾನೆ ಹರೀಶ್(23) ಎಂಬವನನ್ನು ಮಹಾರಾಷ್ಟ್ರದ ಪೂನಾದಲ್ಲಿರುವ ಸಸನೇಪುರದಲ್ಲಿ ದಸ್ತಗರಿ ಮಾಡಿದರು. ಆತ ನೀಡಿದ ಮಾಹಿತಿಯನ್ನಾಧರಿಸಿ ಇತರೆ ಆರೋಪಿಗಳಾದ ನೇಪಾಳ ಮೂಲದ ಲಲಿತ್‌ಶಾಹಿ(21), ಬಸಂತ್‌ಶಾಹಿ(21), ಕೇಶರ್ ಶಾಹಿ(19) ಹಾಗೂ ಮಹೇಶ್‌ದೇವ್‌ಬಾ(28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಆರೋಪಿಗಳಿಂದ ಸುಮಾರು 80 ಲಕ್ಷ ರೂ.ವೌಲ್ಯದ 2.5 ಕೆಜಿ ತೂಕದ ಚಿನ್ನದ ಒಡವೆಗಳು, 1.5 ಕೆಜಿ ತೂಕದ ಚಿನ್ನದಂತಿರುವ ಒಡವೆಗಳು ಒಟ್ಟು 4 ಕೆಜಿ ಮತ್ತು 10 ಕೆಜಿ ತೂಕದ ಬೆಳ್ಳಿಯ ಒಡವೆಗಳು, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು, ಐಪಾಡ್ ಮತ್ತು ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.







