ಹುಲಿ ತಂಡದ ಜೊತೆ ಹೆಜ್ಜೆ ಹಾಕಿದ ಆಸ್ಕರ್ ಫೆರ್ನಾಂಡಿಸ್ !

ಉಡುಪಿ, ಆ. 25: ಸಾರ್ವಜನಿಕ ಸಮಾರಂಭದಲ್ಲಿ ಯೋಗಾಸನ ಹಾಗೂ ಸದನದಲ್ಲಿ ಸುಶ್ರಾವ್ಯವಾಗಿ ಕೊಳಲು ಊದುವ ಮೂಲಕ ವಿಶಿಷ್ಟ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಕೇಂದ್ರ ಮಾಜಿ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕ ಆಸ್ಕರ್ ಫೆರ್ನಾಂಡಿಸ್ ಇಂದು ಹುಲಿವೇಷ ತಂಡದ ಜೊತೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅಧ್ಯಕ್ಷರಾಗಿರುವ ಕೆಳಾರ್ಕಳ ಬೆಟ್ಟು ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಕೆಳಾರ್ಕಳ ಬೆಟ್ಟು ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಹುಲಿವೇಷ ಹಾಕಿದ್ದು, ಈ ತಂಡ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಗಣೇಶ್ ಚತುರ್ಥಿಯ ಶುಭಾಶಯ ಹೇಳು ವುದಕ್ಕಾಗಿ ಉಡುಪಿಯ ಪ್ರವಾಸಿ ಬಂಗಲೆಗೆ ಆಗಮಿಸಿತ್ತು.
30 ಮಂದಿಯ ಹುಲಿವೇಷ ತಂಡವು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಶುಭಾಶಯ ಹೇಳಿ ಬಳಿಕ ಪ್ರವಾಸಿ ಬಂಗಲೆ ಎದುರು ವಿವಿಧ ಸಂಗೀತಕ್ಕೆ ಹೆಜ್ಜೆ ಹಾಕಿ ಕುಣಿಯಿತು. ಕುಣಿತವನ್ನು ವೀಕ್ಷಿಸುತ್ತಿದ್ದ ಆಸ್ಕರ್ ಫೆರ್ನಾಂಡಿಸ್, ಕನ್ನಡ ಚಲನಚಿತ್ರದ ಹಾಡೊಂದರ ಸಂಗೀತಕ್ಕೆ ತಾನೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇವರೊಂದಿಗೆ ಪ್ರಖ್ಯಾತ್ ಶೆಟ್ಟಿ ಕೂಡ ಕುಣಿದರು. ಸುಮಾರು ಏಳೆಂಟು ನಿಮಿಷಗಳ ಕಾಲ ಆಸ್ಕರ್ ಹುಲಿವೇಷ ತಂಡದ ಜೊತೆ ನರ್ತಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ದಿನೇಶ್ ಪುತ್ರನ್, ಹಬೀಬ್ ಅಲಿ, ಮಹಾಬಲ ಕುಂದರ್ ಮೊದಲಾದವರು ಉಪ ಸ್ಥಿತರಿದ್ದರು.







