ಮುಸ್ಲಿಮರ ನೇತೃತ್ವದಲ್ಲಿ ಹಿಂದೂ ಯುವತಿಗೆ ಕಂಕಣ ಭಾಗ್ಯ
ಬಡ ಯುವತಿಯ ವಿವಾಹದಲ್ಲಿ ಸೌಹಾರ್ದತೆ ಮೆರೆದ ಗ್ರಾಮಸ್ಥರು

ಉಡುಪಿ, ಆ.25: ಮಲ್ಲಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಸಾದಿಕ್ ದಿನಾರ್ ನೇತೃತ್ವದಲ್ಲಿ ಸರ್ವಧರ್ಮೀಯರು ಅನಾಥೆ ಹಾಗೂ ಬಡ ಹಿಂದೂ ಯುವತಿಗೆ ವಿವಾಹ ನಡೆಸಿಕೊಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥೆಯಾಗಿ ಪಕೀರಣ ಕಟ್ಟೆಯಲ್ಲಿರುವ ದೊಡ್ಡಮ್ಮ ಮೋಹಿಣಿ ಆಶ್ರಯದಲ್ಲಿ ಬೆಳೆದಿದ್ದ ದಿವ್ಯಾರಿಗೆ ಮನೆಯವರು ಹುಡುಗ ಹುಡುಕಲು ಶ್ರಮಿಸುತ್ತಿದ್ದರು. ಆದರೆ ಬಡತನದ ಕಾರಣದಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯೆ ಮೋಹಿಣಿಯವರ ನೆರೆಮನೆಯ ಕೈರುನ್ನೀಸಾ, ಪಣಿಯೂರಿನ ಮಂಜುನಾಥ ಎಂಬ ಹುಡಗನನ್ನು ದಿವ್ಯಾರಿಗೆ ಮದುವೆ ಮಾಡಿಸುವ ಬಗ್ಗೆ ಮನೆಯವರಲ್ಲಿ ತಿಳಿಸಿದ್ದರು. ಈ ಬಗ್ಗೆ ಮಾತುಕತೆ ನಡೆಸಿ ಹುಡುಗ ಒಪ್ಪಿಗೆಯಾಗಿ ವಿವಾಹಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು.
ಆರ್ಥಿಕ ಸಮಸ್ಯೆಯಿಂದ ದಿವ್ಯಾ ರಿಜಿಸ್ಟ್ರಾರ್ ವಿವಾಹಕ್ಕೆ ನಿರ್ಧಾರ ಮಾಡಿದ್ದರು. ಇದಕ್ಕೆ ಗಂಡಿನ ಕಡೆಯವರು ಕೂಡ ಒಪ್ಪಿದ್ದರು. ಆದರೆ ದಿವ್ಯಾಳ ದೊಡ್ಡಮ್ಮಗೆ ಆಕೆಯ ಮದುವೆ ರಿಜಿಸ್ಟ್ರಾರ್ ಮಾಡಲು ಇಷ್ಟ ಇರಲಿಲ್ಲ. ಅದಕ್ಕೆ ಅವರು ಮಲ್ಲಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಾದಿಕ್ ಅವರನ್ನು ಸಂಪರ್ಕಿಸಿ ಈ ವಿಚಾರ ತಿಳಿಸಿದರು. ಇದಕ್ಕೆ ಒಪ್ಪಿದ ಸಾದಿಕ್ ಜೊತೆ ನಝೀರ್ ಕೊಂಬಗುಡ್ಡೆ, ಲುತ್ಫುಲ್ಲಾ ಮಲ್ಲಾರು, ಸುಧಾಕರ್ ಶೆಟ್ಟಿ, ರಶೀದ್ ಫಕೀರಣಕಟ್ಟೆ, ಲೀಲಾಧರ್ ಶೆಟ್ಟಿ, ಶಭೀ ಅಹ್ಮದ್, ದಿವಾಕರ್ ಶೆಟ್ಟಿ ಜೊತೆ ಸೇರಿದರು.
ಸಾದಿಕ್ ತನ್ನ ಮನೆಯಲ್ಲೇ ವಿವಾಹ ನಡೆಸಲು ದಿವ್ಯಾಳ ಮನೆಯವರಿಗೆ ತಿಳಿಸಿದ್ದರು. ಆದರೆ ಅನಿವಾಸಿ ಭಾರತೀಯ ಉದ್ಯಮಿ ಶೇಖರ್ ಶೆಟ್ಟಿ ಕಳತ್ತೂರು ಚಂದ್ರನಗರದಲ್ಲಿರುವ ತನ್ನ ಸಭಾಭವನದಲ್ಲಿ ಉಚಿತವಾಗಿ ವಿವಾಹ ಸಮಾರಂಭ ನಡೆಸಲು ಹೇಳಿದರು. ಹೀಗೆ ಆ. 24ರಂದು ವಿವಾಹ ಸಮಾರಂಭ ನಡೆಯಿತು. ಇದಕ್ಕೆ ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಸಹಿತ ಗಣ್ಯರು ಸಾಕ್ಷಿಯಾದರು.







