ಬಜ್ಪೆ: 'ಗುಂಪು ಹಿಂಸೆಯನ್ನು ಪ್ರತಿರೋಧಿಸೋಣ' ಮಾನವ ಸರಪಳಿ

ಮಂಗಳೂರು, ಆ. 25: ಗೋ ರಕ್ಷಣೆ ಹೆಸರಲ್ಲಿ ನಡೆಯುವ ಗುಂಪು ಹತ್ಯೆಯನ್ನು ವಿರೋಧಿಸಿ ರಾಷ್ಟ್ರಾದ್ಯಂತ ಏಕ ಕಾಲದಲ್ಲಿ ನಡೆದ 'ಮನೆಯಿಂದ ಹೊರಗೆ ಬನ್ನಿ' ಮಾನವ ಸರಪಳಿ ಕಾರ್ಯಕ್ರಮವು ಬಜ್ಪೆ ಡಿವಿಷನ್ ವ್ಯಾಪ್ತಿಯ ಮೂರು ಮಸೀದಿಗಳಲ್ಲಿ ನಡೆಯಿತು.
ಮಾನವ ಸರಪಳಿಯ ಬಳಿಕ ಬಜ್ಪೆ ಎಂಜೆಎಂ ಮಸೀದಿ ಎದುರುಗಡೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಇರ್ಷಾದ್ ಬಜ್ಪೆ ಸ್ವಾಗತಿಸಿದರು. ಮುಹಮ್ಮದ್ ಇಕ್ಬಾಲ್ ಸಮಾರೋಪ ಭಾಷಣ ಮಾಡಿದರು. ಸ್ವಾಗತ ಸಮಿತಿ ಸಂಚಾಲಕ ಸನಾವುಲ್ಲಾ ಈ ಸಂದರ್ಭ ಉಪಸ್ಥಿತರಿದ್ದರು.
ಜೋಕಟ್ಟೆಯಲ್ಲಿ ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಎದುರುಗಡೆಯ ಮುಖ್ಯ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಕೆ. ಅಶ್ರಫ್ ಸ್ವಾಗತಿಸಿ, ಜಮಾಲ್ ಜೋಕಟ್ಟೆ ಸಮಾರೋಪ ಭಾಷಣ ಮಾಡಿದರು. ಏರಿಯಾ ಅಧ್ಯಕ್ಷ ಮುಹಮ್ಮದ್ ಸಾದಿಕ್, ಕಾರ್ಯದರ್ಶಿ ಇಮ್ತಿಯಾಝ್ ಉಪಸ್ಥಿತರಿದ್ದರು.
ಕಾವೂರಿನ ಎಂ.ಜೆ.ಎಂ.ಜುಮಾ ಮಸೀದಿಯ ಎದುರು ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಾಝ್ ಕಾವೂರು ಸಮಾರೋಪ ಭಾಷಣ ಮಾಡಿದರು. ಮೂರು ಕಡೆಗಳಲ್ಲಿ ನಡೆದ ಮಾನವ ಸರಪಳಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.
ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು 'ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ್ ಆಗುವುದನ್ನು ತಡೆಯೋಣ, ಗುಂಪು ಹತ್ಯೆಯನ್ನು ಕೊನೆಗೊಳಿಸೋಣ, ಅಮಾಯಕ ಜೀವಗಳನ್ನು ರಕ್ಷಿಸೋಣ, ಒಗ್ಗೂಡಿ ಪ್ರತಿರೋಧಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ" ಎಂಬ ಭಿತ್ತಿ ಪತ್ರಗಳನ್ನು ಹಿಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಗುಂಪು ಹತ್ಯೆಯಿಂದ ಹತ್ಯೆಗೈಯ್ಯಲ್ಪಟ್ಟ ಅಮಾಯಕರ ಚಿತ್ರಗಳನ್ನು ಮುಖವಾಡಗಳನ್ನಾಗಿಸಿ ಅವರ ಹತ್ಯೆಗಳನ್ನು ಜನರು ಸ್ಮರಿಸುವಂತೆ ಮಾಡಿದ್ದು ವಿಶೇಷವಾಗಿತ್ತು.







