ಬಾಬಾ ಗುರ್ಮೀತ್ ಸಿಂಗ್ ದುಷ್ಕೃತ್ಯಗಳನ್ನು ಬಯಲಿಗೆಳೆದಿದ್ದ ಪತ್ರಕರ್ತ ನಂತರ ಏನಾದ ಗೊತ್ತೇ?

ಹೊಸದಿಲ್ಲಿ, ಆ.25: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೇರಾ ಸಚಾ ಸೌದಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಅಪರಾಧಿ ಎಂದು ನ್ಯಾಯಾಲಯ ತೀರ್ಪಿತ್ತಿದ್ದರೆ ಇನ್ನೊಂದೆಡೆ ಯುವಕನೊಬ್ಬ ತನ್ನ ತಂದೆಯ ಸಾವಿನ ನ್ಯಾಯಕ್ಕಾಗಿ ಇನ್ನೂ ಕಾಯುತ್ತಿದ್ದಾನೆ.
ಈತ ಬೇರ್ಯಾರೂ ಅಲ್ಲ, 15 ವರ್ಷಗಳ ಹಿಂದೆ ಗುರ್ಮೀತ್ ಸಾಧ್ವಿಗಳ ಮೇಲೆ ಎಸಗಿದ್ದ ಅತ್ಯಾಚಾರವನ್ನು ಬಯಲಿಗೆಳೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿಯವರ ಪುತ್ರ.
ದೇರಾದಲ್ಲಿ ಮಹಿಳೆಯರು ಅನುಭವಿಸುತ್ತಿರುವ ನರಕಯಾತನೆಯ ಬಗ್ಗೆ ಹಾಗೂ ದೇರಾ ಮುಖ್ಯಸ್ಥ ಸಾಧ್ವಿಗಳನ್ನು ಅತ್ಯಾಚಾರಗೈಯುತ್ತಿರುವ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದ ಕೆಲ ತಿಂಗಳುಗಳ ನಂತರ ಅಂದರೆ 2002ರ ಅಕ್ಟೋಬರ್ 24ರಂದು ಛತ್ರಪತಿಯವರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಕೊಲ್ಲಲಾಯಿತು. ತನ್ನ ತಂದೆಗೆ ನ್ಯಾಯ ಸಿಗಬೇಕೆಂದು ಛತ್ರಪತಿಯವರ ಪುತ್ರ ಅಂಶುಲ್ ಕಾನೂನು ಹೋರಾಟ ನಡೆಸುತ್ತಿದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗುರ್ಮಿತ್ ಅಪರಾಧಿ ಎಂದು ತೀರ್ಪಿತ್ತ ಸಿಬಿಐ ನ್ಯಾಯಾಲಯದಲ್ಲೇ ಈ ಪ್ರಕರಣದ ಅಂತಿಮ ವಾದ ನಡೆಯಲಿದೆ.
“ನಾನಾಗ 21 ವರ್ಷದವನಾಗಿದ್ದೆ. ಎಫ್ ಐಆರ್ ನಲ್ಲಿ ಪೊಲೀಸರು ದೇರಾ ಮುಖ್ಯಸ್ಥನ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸದೆ ಇದ್ದುದರಿಂದ ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು ಎನ್ನುವುದೇ ನನಗೆ ತಿಳಿಯಲಿಲ್ಲ” ಎನ್ನುತ್ತಾರೆ ಅಂಶುಲ್. ಅಂಶುಲ್ ಕೊನೆಗೂ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು.
“ಅವರು ನನ್ನ ತಂದೆಗೆ ಗುಂಡಿಕ್ಕಿದ ನಂತರ ಅವರು 28 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಸ್ಥಳೀಯ ಪೊಲೀಸ್ ಠಾಣೆಯೊಂದರಲ್ಲಿ ದೇರಾ ಮುಖ್ಯಸ್ಥನನ್ನು ಅವರು ಆರೋಪಿಯಾಗಿ ಹೆಸರಿಸಿದ್ದರು. ಆದರೆ ಪೊಲೀಸರು ಆತನ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸಿರಲಿಲ್ಲ. ಅಲ್ಲಿಂದಲೇ ಕಾನೂನು ಹೋರಾಟ ಆರಂಭವಾಯಿತು” ಎಂದವರು ಹೇಳಿದ್ದಾರೆ.







