ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅಗತ್ಯ ನೆರವು : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್

ಶಿವಮೊಗ್ಗ, ಆ. 26: ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಜ್ಯದ ಮತೀಯ ಅಲ್ಪಸಂಖ್ಯಾತರ ಸರ್ವಾಂಗೀಣ ವಿಕಾಸಕ್ಕಾಗಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಕೈಗೊಳ್ಳಲಾಗುವ ಚಟುವಟಿಕೆಗಳಿಗಾಗಿ ಸುಮಾರು 830ಕೋಟಿ ರೂ.ಗಳನ್ನು ಕಾಯ್ದಿರಿಸಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಮ್.ಎ.ಗಫೂರ್ ಅವರು ಹೇಳಿದರು.
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ನಿಗಮದ ವತಿಯಿಂದ ನಗರದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಒಟ್ಟು 6.50ಕೋಟಿ ಜನಸಂಖ್ಯೆಯಲ್ಲಿ ಸುಮಾರು 1ಕೋಟಿಯಷ್ಟು ಅಲ್ಪಸಂಖ್ಯಾತರು ಇದ್ದಾರೆ. ಈ ಜನಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಸಮಿತಿ, ಉರ್ದು ಅಕಾಡೆಮಿ, ಮಹಿಳೆರ ಮತ್ತು ಕ್ರಿಶ್ಚಿಯನ್ ವಿಕಾಸಕ್ಕಾಗಿ ಇರುವ ಸಮಿತಿಗಳ ಮೂಲಕ ಒಟ್ಟು ರೂ.2,700/- ಕೋಟಿಗಳನ್ನು ಕಾಯ್ದಿರಿಸಿದೆ ಎಂದವರು ನುಡಿದರು.
ನಿಗಮಕ್ಕಾಗಿ ಬಿಡುಗಡೆಯಾದ ಅನುದಾನದಲ್ಲಿ ರೂ.110/-ಕೋಟಿಗಳನ್ನು ಅರಿವು ಕಾರ್ಯಕ್ರಮಕ್ಕಾಗಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ವೃತ್ತಿಪರ ಶಿಕ್ಷಣಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮುಂತಾದ ಕೋರ್ಸುಗಳನ್ನು ಮಾಡಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ 10,000/-ರೂ.ಗಳಿಂದ 75,000/-ರೂ.ಗಳ ವರೆಗೆ ಸಾಲಸೌಲಭ್ಯ ನೀಡಲಾಗುವುದು ಎಂದ ಅವರು, ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ವಿದ್ಯಾಭ್ಯಾಸ ಮಾಡಲಿಚ್ಚಿಸುವವರಿಗೆ ತರಬೇತಿ ಹಾಗೂ ಶಿಕ್ಷಣಕ್ಕಾಗಿ ರೂ.20.00ಕೋಟಿ ಗಳನ್ನು ಕಾಯ್ದಿರಿಸಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಸುಮಾರು 32,000ವಿದ್ಯಾರ್ಥಿಗಳು ಶೇ.0 ಬಡ್ಡಿದರದಲ್ಲಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದವರು ನುಡಿದರು.
ಇದಲ್ಲದೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯದ ಲಾಭ ಪಡೆದುಕೊಂಡು ಭವಿಷ್ಯದ ಜೀವನವನ್ನು ಉಜ್ವಲಗೊಳಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ನಿಗಮದಿಂದ ಅಲ್ಪಸಂಖ್ಯಾತರಿಗಾಗಿಯೇ ಸ್ವಾವಲಂಬನ, ಅರಿವು, ಶ್ರಮಶಕ್ತಿ, ಸಣ್ಣ ಸಾಲ ಮತ್ತು ಸಹಾಯಧನ ಯೋಜನೆ, ಗಂಗಾಕಲ್ಯಾಣ ಯೋಜನೆ, ಕೃಷಿ ಭೂಮಿ ಖರೀದಿ ಯೋಜನೆ, ಗೃಹ ನಿವೇಶನ ಖರೀದಿ ಹಾಗೂ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ, ಮುಂತಾದ ಯೋಜನೆಗಳು ಜಾರಿಯಲ್ಲಿವೆ. ಇವುಗಳ ಅನುಷ್ಠಾನದಲ್ಲಿ ಆಗುತ್ತಿದ್ದ ಮಧ್ಯವರ್ತಿಗಳ ಹಾವಳಿ ತಡೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.
ವಿಶೇಷವಾಗಿ ಹೈನೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಅಲ್ಪಸಂಖ್ಯಾತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ರೂ.40,000/-ಗಳ ಸಾಲಸೌಲಭ್ಯ ನೀಡುತ್ತಿದ್ದು, ಅದರಲ್ಲಿ 20,000/-ರೂ.ಗಳ ಸಹಾಯಧನ ನೀಡಲಾಗುತ್ತಿದೆ. ಸಾಲ ಪಡೆದ ಫಲಾನುಭವಿಗಳು ಮೇಕೆ, ಕುರಿ-ಕೋಳಿ ಮುಂತಾದವುಗಳ ಸಾಕಾಣಿಕೆ ಮಾಡಬಹುದಾಗಿದೆ ಎಂದ ಅವರು, ನಿಗಮದಿಂದ ಕೃಷಿಗೆ ಒತ್ತು ನೀಡಲಾಗುತ್ತಿದೆ. ಕೃಷಿಗಾಗಿ ಒಂದು ಲಕ್ಷ ರೂ.ಗಳ ವರೆಗೆ ಸಾಲಸೌಲಭ್ಯ ನೀಡಲಾಗುತ್ತಿದ್ದು 50,000/-ರೂ.ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.
ಬಹುಕಾಲದಿಂದ ಖ್ಯಾತವಾಗಿರುವ ರಾಜ್ಯದ ಬೀದರ್‌ನ ಬಿದರಿ ಕಲೆಯನ್ನು ಉತ್ತೇಜಿಸಲು ಬೀದರ್ ಮತ್ತು ಚನ್ನಪಟ್ಟಣದಲ್ಲಿ ಈಗಾಗಲೇ ನಿವೇಶನವನ್ನು ಗುರುತಿಸಲಾಗಿದ್ದು, ತರಬೇತಿ, ಕಾರ್ಯಾಗಾರಗಳನ್ನು ನಡೆಸಲು ಹಾಗೂ ಅಗತ್ಯವಾಗಿರುವ ಯಂತ್ರೋಪಕರಣಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜ್ಯದ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶಗಳಲ್ಲಿನ ಅಲ್ಪಸಂಖ್ಯಾತರು ಹಾಗೂ ಉದ್ಯೋಗ ಅರಸಿ ವಿದೇಶಕ್ಕೆ ಹೋಗಿ ಯಾವುದೋ ಕಾರಣಕ್ಕಾಗಿ ಹಿಂದುರುಗಿದವರು ನಿರುದ್ಯೋಗಿಗಳಾಗಿ ಕಾಲಕಳೆಯದಂತೆ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಆಯ್ದ ತಲಾ 02 ಫಲಾನುಭವಿಗಳಿಗೆ ಸುಮಾರು 10.0ಲಕ್ಷ ರೂ.ಗಳ ಸಾಲಸೌಲಭ್ಯ ನೀಡಲು ಉದ್ದೇಶಿಸಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದವರು ನುಡಿದರು.
ಈ ಎಲ್ಲಾ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತಾಗಬೇಕೆಂಬ ಸದುದ್ದೇಶದಿಂದ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ರಾಜ್ಯದಾದ್ಯಂತ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಮಧ್ಯವರ್ತಿಗಳು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆ ಹೊರತು ದಿಕ್ಕುತಪ್ಪಿಸುವಂತಾಗಬಾರದು. ಫಲಾನುಭವಿಗಳೂ ಕೂಡ ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿಕೊಂಡು, ಸರ್ಕಾರಕ್ಕೆ ಹಿಂದಿರುಗಿಸಬೇಕು. ಪಡೆದ ಹಣ ಕಟ್ಟದೆ ವಂಚಿಸುವುದನ್ನು ಇಸ್ಲಾಂ ಒಪ್ಪುವುದಿಲ್ಲ ಎಂದವರು ನುಡಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 2043ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಸೌಲಭ್ಯ, 1048ವಿದ್ಯಾರ್ಥಿಗಳು ಶ್ರಮಶಕ್ತಿ ಯೋಜನೆಯಡಿ 50,000/-ಗಳ ಸಾಲಸೌಲಭ್ಯ, 2227 ಫಲಾನುಭವಿಗಳು ಕಿರುಸಾಲದ ನೆರವು, ನೇರಸಾಲಿ ಯೋಜನೆಯಡಿ 27ಫಲಾನುಭವಿಗಳು, 303ಫಲಾನುಭವಿಗಳು ಗಂಗಾಕಲ್ಯಾಣ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಮಾತನಾಡಿ, ಅಲ್ಪಸಂಖ್ಯಾತರ ವಿಕಾಸಕ್ಕಾಗಿ ರಚಿಸಲಾಗಿರುವ ನಿಗಮವು ಅಲ್ಪಸಂಖ್ಯಾತರ ಸಮುದಾಯದ ವಿಕಾಸಕ್ಕೆ ಸಂಜೀವಿನಿಯಂತೆ ಕಾರ್ಯನಿರ್ವಹಿಸಲಿದೆ. ನಿಗಮವು ಸಮುದಾಯದ ಜನರ ಅಗತ್ಯಗಳಿಗೆ ಅಲ್ಪಪ್ರಮಾಣದಿಂದ ಭಾರೀ ಮೊತ್ತದ ಸಾಲಸೌಲಭ್ಯಗಳನ್ನು ಒದಗಿಸುತ್ತಿದ್ದು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದವರು ನುಡಿದರು.
ಅಲ್ಪಸಂಖ್ಯಾತರ ಸಮುದಾಯದ ಯಾವುದೇ ವ್ಯಕ್ತಿ ತಮ್ಮ ಕುಟುಂಬದ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅದು ಪೋಷಕರು ಮತ್ತು ಸಮಾಜದಲ್ಲಿರುವ ಎಲ್ಲರ ಹೊಣೆಯಾಗಿದೆ. ಸರ್ಕಾರವೂ ಕೂಡ ಅಲ್ಪಸಂಖ್ಯಾತರ ಸಮುದಾಯದ ವಿಕಾಸಕ್ಕೆ ಅಗತ್ಯ ನೆರವು ಒದಗಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಇಸ್ಮಾಯಿಲ್ ಖಾನ್, ರೆ.ಸಿಸ್ಟರ್ ಹೆಲೆನ್, ಎ.ಬಿ.ಪದ್ಮನಾಭ, ತೀ.ನ.ಶ್ರೀನಿವಾಸ್, ಮರಿಯಪ್ಪ, ಆರೀಫ್ ಉಲ್ಲಾಖಾನ್, ಹಸನ್ ಅಲೀಖಾನ್, ಶ್ರೀಮತಿ ಶಮೀಮ್ ಬಾನು, ಅಜ್ಮತ್‌ವುಲ್ಲಾ ಮುಂತಾದವರು ಉಪಸ್ಥಿತರಿದ್ದರು.







