ಚಿನ್ನಾಭರಣ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
.jpg)
ಹಾಸನ, ಆ.26: ಜ್ಯುವೆಲ್ಲರಿ ಶಾಪಿನ ಚಿನ್ನಾಭರಣ ಕಳವು ಪ್ರಕರಣದಲ್ಲಿ ಅರಕಲಗೂಡು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 97, ಲಕ್ಷದ 31 ಸಾವಿರದ 600 ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದರು.
ಈ ಬಗ್ಗೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ.21 ರಂದು ರಾತ್ರಿ 11-45ರ ಸಮಯದಲ್ಲಿ ಅರಕಲಗೂಡು ಮಾರುತಿ ಕಾಂಪ್ಲೆಕ್ಸ್ ನಲ್ಲಿರುವ ಮದನ್‍ಲಾಲ್ ಅವರ ಕೃಷ್ಣ ಬ್ಯಾಂಕರ್ ಆ್ಯಂಡ್ ಜ್ಯವೆಲ್ಲರಿ ಶಾಪ್‍ನಲ್ಲಿ ಕಳವುವಾದ ಚಿನ್ನಾಭರಣವನ್ನು ಪೊಲೀಸರು ಪತ್ತೆ ಹಚ್ಚಲಾಗಿದೆ ಎಂದರು.
ಈ ಪ್ರಕರಣವನ್ನು ಭೇದಿಸಿದ ಅರಕಲಗೂಡು ಪೊಲೀಸರು ಖಚಿತ ಮಾಹಿತಿ ಮೆರೆಗೆ ವಾಟರ್ ಸಪ್ಲೆಯಾಗಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಓಂಪ್ರಕಾಶ್ (23) ಹಾಗೂ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಬರಗೂರು ಗ್ರಾಮದ ರಘು (27) ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಓಂಪ್ರಕಾಶ್ ಎಂಬವನು ಕೃಷ್ಣ ಬ್ಯಾಂಕರ್ ಆ್ಯಂಡ್ ಜ್ಯವೆಲ್ಲರಿ ಶಾಪ್‍ನ ಮಾಲಕ ಮದನ್‍ಲಾಲ್ ಬಳಿ ಓಂಪ್ರಕಾಶ್ ಕೆಲಸ ಮಾಡುತ್ತಿದ್ದನು. ಅಲ್ಲದೆ ಮಾಲಕ ಮದನ್‍ಲಾಲ್ ಅವರ ಮನೆಗೆ ಆರೋಪಿ ಬಂದು ಹೋಗುತ್ತಿದ್ದನು. ಬಳಿಕ ಓಂಪ್ರಕಾಶ್ ಮಾಲಕನಿಂದ ಕೆಲಸ ಬಿಟ್ಟು ಮಾರ್ಚ್‍ನಲ್ಲಿ ಸ್ವಂತ ವಾಟರ್ ಸಪ್ಲೆ ಪ್ರಾರಂಭಿಸಿದ್ದಾನೆ. ಆರೋಪಿಯ ವಾಟರ್ ಸಪ್ಲೆ ಕೆಲಸದಲ್ಲಿ ರಘು ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಈ ಬಗ್ಗೆ ಪೊಲೀಸರು ಅನುಮಾನಾಸ್ಪದವಾಗಿ ರಘುವನ್ನು ತನಿಖೆಗೆ ಒಳಪಡಿಸಿದಾಗ ಗಿರವಿ ಹಾಗೂ ಅಂಗಡಿಯ ಚಿನ್ನಾಭರಣವನ್ನು ಎರಡನೇ ಆರೋಪಿ ಚಾಲಕ ರಘು ಮನೆಯಲ್ಲಿ ಇಟ್ಟಿರುವುದಾಗಿ ತಿಳಿದು ಬಂದಿದೆ. ಒಟ್ಟು 3 ಕೆಜಿ 511 ಗ್ರಾಂ ಚಿನ್ನದ ಆಭರಣ ಹಾಗೂ 6 ಲಕ್ಷದ 3 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಕೃತ್ಯಕ್ಕೆ ಬಳಸಿದ ಟಾಟಾ ವಾಹನದ ಸಂಖ್ಯೆ ಕಂಡುಹಿಡಿಯುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಆರೋಪಿಗಳನ್ನು ಪತ್ತೆ ಹಚ್ಚಿ ಒಟ್ಟು ಮೌಲ್ಯ 97 ಲಕ್ಷದ 31 ಸಾವಿರದ 600 ರೂ.ವಶಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣವನ್ನು ಭೇದಿಸಿದ ಹೊಳೆನರಸೀಪುರ ಡಿಎಸ್ಪಿ ಎಂ.ಎನ್. ಶಶಿಧರ್ ನೇತೃತ್ವದ ಸಿಪಿಐ ಶಿವರಾಜ್ ಆರ್. ಮುಧೋಳ್ ಹಾಗೂ ರವಿಕಿರಣ್, ಪಿಎಸೈ ಅರಕಲಗೂಡು ಠಾಣೆಯ ಹಾಗೂ ಸಿಬ್ಬಂದಿಗಳಾದ ಬಸವರಾಜು, ಮಹೇಶ್, ಬಸಪ್ಪ, ವಿಜಿಕುಮಾರ್, ಚಂದ್ರಶೇಖರ್, ಸುರೇಶ್, ಜೀಪ್ ಚಾಲಕ ಜಗನ್ನಾಥ್ ಕೆಲಸವನ್ನು ಶ್ಲಾಘಿಸಿದರು.
ಗೋಷ್ಠಿಯಲ್ಲಿ ಪೊಲೀಸ್ ಅಧೀಕ್ಷಕ ಜ್ಯೋತಿ ವೈಜನಾಥ್, ಅಪರ ಪೊಲೀಸ್ ಅಧಿಕಾರಿ ಎಂ.ಎನ್. ಶಶಿಧರ್ ಇತರರು ಉಪಸ್ಥಿತರಿದ್ದರು.







