ಬಿಡಾಡಿ ದನಗಳನ್ನು ಕಟ್ಟಿ ಸಾಕಲು ದನದ ಮಾಲಿಕರಿಗೆ ಗ್ರಾಪಂ ಮನವಿ

ಬಣಕಲ್, ಆ.26: ಕೊಟ್ಟಿಗೆಹಾರದ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯು ಅಲ್ಲಲ್ಲಿ ಕಾಣುತ್ತಿದ್ದು ಗೋವುಗಳು ಅದನ್ನು ತಿಂದು ಹೊಟ್ಟೆ ಬಾಧೆ ತಲೆದೋರಿ ಸಾವನ್ನಪ್ಪುತ್ತಿರುವ ಘಟನೆ ಕೊಟ್ಟಿಗೆಹಾರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಬಿಡಾಡಿ ದನಗಳು ಇತ್ತೀಚೆಗೆ ಕೊಟ್ಟಿಗೆಹಾರದ ಸುತ್ತಮುತ್ತ ಸುತ್ತಾಡುತ್ತಿದ್ದು, ರಸ್ತೆ ಬದಿಯ ಪ್ಲಾಸ್ಟಿಕ್ ತಿಂದು ರೋಗಪೀಡಿತವಾಗುತ್ತಿವೆ. ಪ್ಲಾಸ್ಟಿಕ್‍ನಂತಹ ವಸ್ತು ಕರಗದೇ ಅಲ್ಲಲ್ಲಿ ಬಿಸಾಕಿದ ತಿಂಡಿಯ ಪ್ಲಾಸ್ಟಿಕ್ ಪೊಟ್ಟಣಗಳು ಹಾಗೂ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳು ಮಣ್ಣು ಸೇರುತ್ತಿದ್ದು ಕೊಟ್ಟಿಗೆಹಾರದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿ ಕಸದ ರಾಶಿಯೇ ಇದೆ.
ದನಗಳ ಮಾಲಿಕರು ದನಗಳನ್ನು ಕಟ್ಟಿ ಹಾಕಿ ಸಾಕುವ ಗೋಜಿಗೆ ಹೋಗದೇ ಅವುಗಳು ಬಿಡಾಡಿ ದನಗಳಾಗಿ ರಸ್ತೆಗಳಲ್ಲಿ ಸಾಗಿ ಪೇಟೆಗಳಲ್ಲಿ ಸುತ್ತಾಡುತ್ತಿರುವುದು ದನಗಳ ಮಾರಣ ಹೋಮಕ್ಕೆ ಪ್ಲಾಸ್ಟಿಕ್ ಎಂಬ ಮಾರಕ ವಸ್ತು ದನಗಳ ಹೊಟ್ಟೆಗೆ ಸೇರಲು ಕಾರಣವಾಗುತ್ತಿದೆ. ಇತ್ತೀಚೆಗೆ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ದನವೊಂದು ಕೊಟ್ಟಿಗೆಹಾರದ ಖಾಸಗಿ ಬಸ್ ನಿಲ್ದಾಣದಲ್ಲಿ ಹೊಟ್ಟೆ ಉಬ್ಬಿ ಪ್ಲಾಸ್ಟಿಕ್ ತ್ಯಾಜ್ಯ ಹೊಟ್ಟೆಯಲ್ಲಿ ಕರಗದೇ ಉಸಿರಾಟದಲ್ಲಿ ತೊಂದರೆ ಕಂಡು ಕೆಲವು ಹೊತ್ತಿನ ನಂತರ ಅಸು ನೀಗಿದೆ.
ಬಣಕಲ್ ಪಶು ವೈಧ್ಯಾಧಿಕಾರಿ ಅಝೀಝ್ ಕೊಟ್ಟಿಗೆಹಾರಕ್ಕೆ ಬಂದು ದನಕ್ಕೆ ಚಿಕಿತ್ಸೆ ನೀಡಿದರಾದರೂ ದನವು ಪ್ಲಾಸ್ಟಿಕ್ ತಿಂದಿದ್ದು ಕರುಳಿಗೆ ಸುತ್ತಿ ಕರಗದೇ ದನ ಸಾಯುವ ಸ್ಥಿತಿಯಲ್ಲಿರುವುದು ಕಂಡು ಬಂತು. ಹೊಟ್ಟೆ ಉಬ್ಬುವಿಕೆ ಇಳಿಕೆಗಾಗಿ ಚುಚ್ಚು ಮದ್ದು ನೀಡಿದ್ದು ದನವು ಕೊನೆಯ ಸಾವಿನ ಘಳಿಗೆಯಲ್ಲಿದೆ ಎಂದು ವೈದ್ಯರು ತಿಳಿಸಿದರು.
“ದನದ ಮಾಲೀಕರು ತಮ್ಮ ತಮ್ಮ ದನಗಳನ್ನು ರಸ್ತೆಗೆ ಬಿಡದೇ ನಿಗಾ ವಹಿಸಬೇಕು. ಗ್ರಾಪಂ ವತಿಯಿಂದ ಕಸದ ವ್ಯವಸ್ಥೆಯು ವಾರಕೊಮ್ಮೆ ಕಸವನ್ನು ದೂರಕ್ಕೆ ಎಸೆಯಲಾಗುತ್ತದೆ. ವರ್ತಕರು ಅಂಗಡಿಯ ಪ್ಲಾಸ್ಟಿಕ್ ತರಹದ ಕಸವನ್ನು ಹೊರಗಡೆ ಬಿಸಾಕದೇ ಜಾನುವಾರುಗಳ ಪ್ರಾಣ ಉಳಿಸಲು ಶ್ರಮಿಸಬೇಕು. ಪ್ಲಾಸ್ಟಿಕ್ ತರದ ತ್ಯಾಜ್ಯವಿದ್ದರೆ ಅದನ್ನು ವಿಂಗಡನೆ ಮಾಡಿ ವಾರಕೊಮ್ಮೆ ಸ್ವಚ್ಚಮಾಡುವ ಕಾರ್ಮಿಕರಿಗೆ ನೀಡಿ ಸಹಕರಿಸಬೇಕು. ಬಿಡಾಡಿ ದನಗಳ ಹಾವಳಿ ಪೇಟೆಗಳಲ್ಲಿ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ದನದ ಮಾಲಿಕರು ತಮ್ಮ ದನದ ನಿಗಾವಹಿಸುವುದು ಅಗತ್ಯವಾಗಿದೆ.”
- ವೇಣುಗೋಪಾಲ್ ಪೈ, ಕಾರ್ಯಧರ್ಶಿ, ವರ್ತಕರ ಸಂಘ,ಕೊಟ್ಟಿಗೆಹಾರ







