ಗಂಭೀರ ವಿಷಯ ನಗಣ್ಯ ಮಾಡುವುದು ಬಿಜೆಪಿಯ ಸಿದ್ಧಾಂತ: ಮನೀಶ್ ಸಿಸೋಡಿಯಾ

ಬೆಂಗಳೂರು, ಆ.26: ದೇಶದಲ್ಲಿ ಜರಗುವ ಗಂಭೀರ ವಿಷಯಗಳನ್ನು ನಗಣ್ಯ ಮಾಡುವುದು ಹಾಗೂ ನಗಣ್ಯ ವಿಷಯಗಳನ್ನು ಮುಖ್ಯ ವಿಷಯವನ್ನಾಗಿ ಪರಿವರ್ತಿಸುವುದು ಬಿಜೆಪಿಯ ಮೂಲ ಸಿದ್ಧಾಂತವೆಂದು ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಶನಿವಾರ ಆಮ್‌ಆದ್ಮಿ ಪಕ್ಷದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಆಪ್ ನಾಗರಿಕ ಸಂಬಲೀಕರಣ’ ಕಾರ್ಯಕ್ರಮ ಹಾಗೂ ‘ಜನರಿಂದ ಸರಕಾರ-ಒಂದು ಸಂವಾದ’ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹರಿಯಾಣದ ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮಿಟ್ ರಾಮ್ ರಹೀಂ ಸಿಂಗ್ ಬೆಂಬಲಿಗರ ಹಿಂಸಾಚಾರ ಪ್ರಕರಣವು ಬಿಜೆಪಿಗೆ ಮುಖ್ಯ ವಿಷಯವೇ ಅಲ್ಲ. ಹಾಗೆಯೇ ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದ ಶಿಶುಗಳ ಮಾರಣ ಮೃಂದಗವು ಬಿಜೆಪಿ ನಗಣ್ಯವಾಗಿಯೇ ಕಾಣುತ್ತದೆ. ಇದು ಬಿಜೆಪಿ ಸಿದ್ಧಾಂತದ ಮೂಲ ಸ್ವರೂಪವೇ ಆಗಿದೆ ಎಂದು ಕಿಡಿಕಾರಿದರು.
ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮಿಟ್ ರಾಮ್ ರಹೀಂ ಸಿಂಗ್ ಮೇಲಿದ್ದ ಆರೋಪ ನ್ಯಾಯಾಲದಯಲ್ಲಿ ಸಾಭೀತಾಗಿದೆ. ಆದರೆ, ರಾಮ್ ರಹೀಂ ಸಿಂಗ್‌ರವರ ಬೆಂಬಲಿಗರು ತೀರ್ಪನ್ನು ವಿರೋಧಿಸಿ ಹಿಂಸಾಚಾರಕ್ಕೆ ಇಳಿದಿರುವುದು ದುರಾದೃಷ್ಟಕರ. ಗಲಭೆಯಲ್ಲಿ ಜನಸಾಮಾನ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹತ್ಯೆಗಳ ನೇರ ಹೊಣೆಯನ್ನು ಹರಿಯಾಣದ ಬಿಜೆಪಿ ಸರಕಾರವೇ ಹೊರಬೇಕಾಗುತ್ತದೆ ಎಂದರು.
ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಲಿ: ಹರಿಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಾವು-ನೋವುಗಳ ಸಂಭವಿಸುತ್ತಿವೆ. ಹರಿಯಾಣ ಸೇರಿದಂತೆ ದೇಶದ ಜನತೆ ಭಯಗ್ರಸ್ತರಾಗಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಕೇಂದ್ರದ ಬಿಜೆಪಿ ಸರಕಾರ ದೇಶದಲ್ಲಿ ಏನು ನಡೆದಿಲ್ಲದಂತೆ ಮೌನವಹಿಸಿರುವುದು ಆತಂಕ ಮೂಡಿಸಿದೆ ಎಂದು ವಿಷಾದಿಸಿದರು.
ಪ್ರಜಾಪ್ರಭುತ್ವದಡಿ ಆಯ್ಕೆಯಾದ ಬಿಜೆಪಿ ಸರಕಾರದ ನಾಯಕರು ಜನತೆಯ ಸಾವು-ನೋವುಗಳನ್ನು ಈ ಮಟ್ಟಕ್ಕೆ ನಿರ್ಲಕ್ಷಿಸಿರುವ ಉದಾಹರಣೆ ಎಲ್ಲೂ ಕಂಡಿಲ್ಲ. ಕನಿಷ್ಠ ಮಟ್ಟದ ಮನುಷ್ಯ ಪರವಾದ ವೌಲ್ಯಗಳನ್ನು ಕೇಂದ್ರ ಸರಕಾರ ಹೊಂದಿದ್ದರೆ ಕೂಡಲೇ ಹರಿಯಾಣದಲ್ಲಿ ನಡೆಯುತ್ತಿರುವ ಗಲಭೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕಠಿಣವಾದ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.







