ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನ ಶೀಘ್ರದಲ್ಲೇ ಭರ್ತಿ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ. 26: ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನಗಳ ಭರ್ತಿಗೆ ಪಕ್ಷದ ಹೈಕಮಾಂಡ್ ಸಮ್ಮತಿಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವ ಸ್ಥಾನಕ್ಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಯಾರು ಏನೇ ಅಂದರೂ ಏನು ಆಗಲ್ಲ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಪ್ರಮಾಣವಚನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ನಿಗದಿ ಮಾಡಲಿದ್ದಾರೆ ಎಂದು ಹೇಳಿದರು.
ಆ.30ಕ್ಕೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಅಂದು ಅಲ್ಪಸಂಖ್ಯಾತ ವಿಭಾಗದ ಸಭೆ ನಡೆಸಿ ಆ.31ರಂದು ಸಚಿವರ ಜತೆ ಸಭೆ ನಡೆಸುತ್ತಾರೆ. ಆದರೆ, ಯಾವುದೇ ಮೌಲ್ಯಮಾಪನ ಇಲ್ಲ. ಸಚಿವರಿಗೆ ಏನು ಸೂಚನೆ ನೀಡಲಿದ್ದಾರೆ ಎನ್ನುವುದನ್ನು ನೋಡಬೇಕಿದೆ ಎಂದು ತಿಳಿಸಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಸಮಿತಿಗಳ ಕಾರ್ಯದ ಪ್ರಗತಿಯ ಪರಿಶೀಲನೆಯನ್ನೂ ಅವರು ನಡೆಸಲಿದ್ದಾರೆಂದ ಅವರು, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಗತ್ಯ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಊಟಕ್ಕೆ ಆಹ್ವಾನವೇ ಸಾಧನೆಯಲ್ಲ: ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ದಲಿತರನ್ನು ಊಟಕ್ಕೆ ಕರೆದಿರಲಿಲ್ಲ. ಆದರೆ, ಇದೀಗ ಕರೆದಿರುವುದು ಬಹದೊಡ್ಡ ಸಾಧನೆ. ಇದೀಗ ದಲಿತರಿಗೂ ಹೊಟೇಲ್ ಊಟ ಮಾಡಿಸುತ್ತಾರೋ ಏನು ನೋಡಬೇಕು ಎಂದು ಪರಮೇಶ್ವರ್ ಟೀಕಿಸಿದರು.
ದಲಿತರನ್ನು ಮನೆಗೆ ಕರೆದಿರೋದು ಅವರಲ್ಲಿ ಬದಲಾವಣೆ ತರಬಹುದು. ಆದರೆ ನಮಗೆ ಇದರಿಂದ ಬದಲಾವಣೆ ಏನೂ ಆಗಲ್ಲ ಎಂದ ಅವರು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯವರು ಕೆದಕುತ್ತಿದ್ದಾರೆ. ಚುನಾವಣೆಗಾಗಿ ರಾಜಕೀಯ ದುರುದ್ದೇಶದಿಂದಲೇ ಇದನ್ನು ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.







