ಸಾಲಮನಾಕ್ಕೆ ಆಗ್ರಹಿಸಿ ಪ್ರಧಾನಿಗೆ ರೈತರಿಂದ ಸಾಮೂಹಿಕ ಮನವಿ
ಬೆಂಗಳೂರು, ಆ. 26: ರಾಜ್ಯದಲ್ಲಿ ನಾಲ್ಕು ವರ್ಷದಿಂದ ಆವರಿಸಿರುವ ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸಿರುವ ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರಿಂದ ಸಾಮೂಹಿಕವಾಗಿ ಮನವಇ ಸಲ್ಲಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಂದಾಗಿದೆ.
ರೈತರ ಸಂಪೂರ್ಣ ಸಾಲದ ಹೊಣೆಯ ಜೊತೆಗೆ ಕೃಷಿಗೆ ನೀರಾವರಿ ಸೌಕರ್ಯ, ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ನಿಗದಿಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ರೈತ ಸಂಘ ಹಾಗೂ ಹಸಿರು ಸೇನೆಯು ಈಗಾಗಲೇ ಸುಮಾರು ಐದು ಲಕ್ಷಕ್ಕೂ ಅಧಿಕ ರೈತರಿಂದ ಅರ್ಜಿಯನ್ನು ಸಂಗ್ರಹಿಸಿದೆ.
ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲ, ಖಾಸಗಿ ಸಾಲ, ಫೈನಾನ್ಸ್ ಮತ್ತು ಕೈ ಸಾಲಗಳಿಂದ ರಾಜ್ಯದ ರೈತರು ತತ್ತರಿಸಿದ್ದಾರೆ. ಈ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ರೈತರ ಪಾಡು ಅಧೋಗತಿಗೆ ಸಾಗಿದೆ. ರೈತರ ರಕ್ಷಣೆಗಾಗಿ ಈ ಎಲ್ಲ ಸಾಲಗಳನ್ನು ಸರಕಾರವೇ ತಿರುವಳಿ ಮಾಡಿಕೊಳ್ಳಬೇಕು ಎಂಬುವುದು ಸಂಘಟನೆಯ ಆಗ್ರಹ.
ಬೆಳೆಯ ಸಾಲ, ಕೃಷಿ ಯಂತ್ರೋಪಕರಣ, ಸಾಧನಗಳ ಖರೀದಿ ಸಾಲ, ಮೇವು -ಜಾನುವಾರು ಖರೀದಿ ಸಾಲ, ಕೃಷಿಗಾಗಿ ಸ್ತ್ರೀ ಶಕ್ತಿ ಸಂಘಗಳಲ್ಲಿ ರೈತ ಮಹಿಳೆಯರ ಸಾಲ ಸೇರಿದಂತೆ ಕೃಷಿ ಸಂಬಂದಿತ ಎಲ್ಲ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲು ಮನವಿಯಲ್ಲಿ ಉಲ್ಲೇಖಿಸಿಲಾಗಿದೆ.
ರೈತರಿಂದ ಸಂಗ್ರಹಿಸಿರುವ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಲ್ಲಿಸಲಾಗುವುದು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಇದೇ ತಿಂಗಳು 30ರಿಂದ ಜಿಲ್ಲಾಧಿಕಾರಿಗಳಿಗೆ ನೇರವಾಗಿ ರೈತರಿಂದಲ್ಲೇ ಮನವಿ ಸಲ್ಲಿಸಲಾಗುತ್ತದೆ.
ನ.20ಕ್ಕೆ ಪ್ರಧಾನಿ ಭೇಟಿ: ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಕುರಿತು ನ.20ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತ ಮುಖಂಡರ ನಿಯೋಗ ಭೇಟಿ ಆಗಲಿದೆ.ಈ ವೇಳೆ ಪ್ರಧಾನಿ ಅವರ ಬಳಿ ರಾಜ್ಯ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಳ್ಳಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಮೊರೆ
ಸತತ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಸಾಲ ಕೇಂದ್ರ ಸರಕಾರ ಮನ್ನಾ ಮಾಡದಿದ್ದರೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಾಗುವುದು. ಬರಗಾಲ ಪೀಡಿತ ಪ್ರದೇಶದ ರೈತರ ಸಾಲ ಮಾಡುವ ಕುರಿತು ಅಲಹಬಾದ್ ಕೋರ್ಟ್‌ನ ತೀರ್ಪು ನಮ್ಮ ಬೆಂಬಲಕ್ಕೆ ಬರಲಿದೆ.
-ಕೋಡಿಹಳ್ಳಿ ಚಂದ್ರಶೇಖರ್, ರ್ಅಧ್ಯಕ್ಷ ರೈತ ಸಂಘ-ಹಸಿರು ಸೇನೆ
ಸತತ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ರಕ್ಷಿಸಲು ಸರಕಾರದ ಮುಂದೆ ಇರುವುದು ಇದು ಒಂದೇ ದಾರಿ.
-ಮುನಿರಾಜು ಸುಸ್ತಿದಾರ ರೈತ, ಹೊಸಕೋಟೆ







