ಪೋತದಾರ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಕಂಬನಿ
ಬೆಂಗಳೂರು, ಆ. 26: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಮಹಾಜನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದ್ದ ಮಾಜಿ ಸಚಿವ ಪೋತದಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಂಬನಿ ಮಿಡಿದಿದ್ದಾರೆ.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿ, ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ರಾಮ್‌ಭಾವ್ ಪೋತದಾರ್ ಸರಳ ವ್ಯಕ್ತಿ. ಅಂತೆಯೇ, ಅವರದು ವಿರಳ ವ್ಯಕ್ತಿತ್ವ. ಮಹಾರಾಷ್ಟ್ರದ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಾಟಕ ರಂಗದ ಗೀಳು. ರಾಜಕಾರಣದಲ್ಲಿ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಹೆಗಡೆ ಅವರ ಸಾಂಗತ್ಯ. ವಣಕುದುರೆ ಶಾಂತಾರಾಮ್, ರಾಜ್‌ಕಪೂರ್, ದಿಲೀಪ್ ಕುಮಾರ್‌ನಂತಹ ಹಿಂದಿ ಚಲನಚಿತ್ರ ರಂಗದ ದಿಗ್ಗಜರೊಂದಿಗೆ ಒಡನಾಟ. ಅದೇ ರೀತಿ ಜನರೊಂದಿಗೆ ಸಾಮಾನ್ಯನಾಗಿ ಬೆರೆತು ವಿಶೇಷ ಬಾಂಧವ್ಯ ಸಾಧಿಸಿದ್ದರು ಎಂದರು.
ಪೋತೆದಾರ್ ಅವರನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಪೋತದಾರ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಹಿರಿಯ ಚೇತನದ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.





